

ತುಮಕೂರು : ಸ್ಮಾರ್ಟ್‌ಸಿಟಿ ವತಿಯಿಂದ ಸರ್ವೀಸ್ ರಸ್ತೆ ಅಗಲೀಕರಣ, ಫುಟ್‌ಪಾತ್ ನಿರ್ಮಾಣ ಕಾಮಗಾರಿಗೆ ವಾಲ್ಮೀಕಿನಗರದ ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ತಡೆಯೊಡ್ಡಿದರು. ನಿಯಮಾನುಸಾರ ಯಾವುದೇ ತಾರತಮ್ಯವಿಲ್ಲದೆ ಪಾದಚಾರಿ ರಸ್ತೆ ನಿರ್ಮಿಸುವಂತೆ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದರು.
ನಗರದ ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದ ಮುಂಭಾಗ ಬಿ.ಎಚ್.ರಸ್ತೆಯ ಸೌಂದರ‌್ಯೀಕರಣ ಕಾಮಗಾರಿ ಕೈಗೆತ್ತಿಕೊಂಡಿದ್ದು ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆ ಒತ್ತುವರಿ ತೆರವು ಹಾಗೂ ಫುಟ್‌ಪಾತ್ ನಿರ್ಮಾಣ ಕಾಮಗಾರಿಗೆ ಸೋಮವಾರ ಮುಂದಾದಾಗ 22ನೇ ವಾರ್ಡ್‌ನ ಸ್ಥಳೀಯ ನಿವಾಸಿಗಳು, ಅಂಗಡಿ ಮಾಲೀಕರು ಹಾಗೂ ವಾಲ್ಮೀಕಿನಗರದ ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಕಾಮಗಾರಿ ತಡೆದರಲ್ಲದೆ, ಕೆಲಸಗಾರರ ಜತೆ ವಾಗ್ವಾದಕ್ಕಿಳಿದರು. ಈ ವೇಳೆ ಸ್ಥಳಕ್ಕೆ ಬಂದ ಸ್ಮಾರ್ಟ್‌ಸಿಟಿ, ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಪ್ರಭಾವಿಗಳಿಗೆ ಮಣಿಯದೆ ನಿಷ್ಪಕ್ಷಪಾತವಾಗಿ ಒತ್ತುವರಿ ತೆರವು ಮಾಡಿ, ಒತ್ತುವರಿ ತೆರವಿನಲ್ಲಿನ ತಾರತಮ್ಯವು ಖಾಸಗಿ ಅತಿಕ್ರಮಣಕ್ಕೆ ಪೂರಕವಾಗಿದೆ ಎಂಬುದನ್ನು ತೋರುತ್ತಿದೆ ಎಂದು ಆರೋಪಿಸಿದರು.
ವಾಲ್ಮೀಕಿ ನಗರ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಟಿ.ಸಿ.ದೊಡ್ಡಬಸಪ್ಪ ಮಾತನಾಡಿ, ಈ ರಸ್ತೆಯ ವಿಸ್ತರಣೆ ಕಾರ್ಯ ಹಲವು ಕಡೆ ಮುಖ್ಯರಸ್ತೆಯ ಮಧ್ಯಭಾಗದಿಂದ ಆರಂಭ ಮಾಡುತ್ತಿದ್ದು, ಆರಂಭದಿಂದಲೂ ಸರ್ವೀಸ್ ರಸ್ತೆ ಅಗಲೀಕರಣವಾಗಬೇಕು. ಅದನ್ನು ಬಿಟ್ಟು ಅಲ್ಲಲ್ಲಿ ಮಧ್ಯಭಾಗದಲ್ಲಿ ಕಾಮಗಾರಿ ಆರಂಭಿಸುತ್ತಿದ್ದು, ಬಲಾಢ್ಯರಿಗೆ ಅನುಕೂಲ ಕಲ್ಪಿಸುವ ಉದ್ದೇಶವಿಟ್ಟುಕೊಂಡು ತಾರತಮ್ಯವೆಸಗಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಡಿಪಿ ಅಳತೆಯ ಪ್ರಕಾರ ರಸ್ತೆ ಅಗಲೀಕರಣವಾಗಬೇಕು. ಆದರೆ, ಸಿಡಿಪಿ ಅಳತೆಯಂತೆ ಸರ್ವೀಸ್ ರಸ್ತೆ ಅಗಲೀಕರಣವಾಗುತ್ತಿಲ್ಲ. ಸರ್ವೀಸ್ ರಸ್ತೆಯಲ್ಲಿ ಅಂಗಡಿ ಮಳಿಗೆಗಳು ರಸ್ತೆಗೆ ಒತ್ತುವರಿಯಾಗಿದ್ದು, ಕಿರಿದಾದ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ಬಡಾವಣೆಯ ನಾಗರೀಕರು ಓಡಾಡಲು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಸರ್ವೀಸ್ ರಸ್ತೆಯನ್ನು ತಾರತಮ್ಯ ಮಾಡದೇ ಸಿಡಿಪಿ ಅಳತೆಯ ಪ್ರಕಾರ ಮಾಡಬೇಕು., ಇಲ್ಲವಾದಲ್ಲಿ ನಾವು ರಸ್ತೆ ಅಗಲೀಕರಣ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಗರ ನಾಗರೀಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಪ್ರಸನ್ನಕುಮಾರ್, ಸದಸ್ಯರಾದ ಶಿವಕುಮಾರ್, ವೆಂಕಟೇಶ್, ತೋಂಟಾರಾಧ್ಯ, ಲಕ್ಷ್ಮಣಗೌಡ್ರು, ರಾಜೇಶ್, ಟಿ.ಸಿ.ಮಂಜುನಾಥ್, ಗಿರೀಶ್, ಪ್ರಕಾಶ್, ಮಂಜುನಾಥ್ ಮತ್ತಿತರರು ಹಾಜರಿದ್ದರು.
ರಸ್ತೆ ಆರಂಭದಿಂದಲೇ ಒತ್ತುವರಿ ತೆರವು, ಅಗಲೀಕರಣ ಕಾಮಗಾರಿ ಪ್ರಾರಂಭಿಸಿ. ಹಾಗಾದರೆ ನಮ್ಮ ಅಂಗಡಿಯನ್ನು ಸಹ ಬಿಟ್ಟುಕೊಡುತ್ತೇವೆ. ಇಲ್ಲದಿದ್ದರೆ ಕಾಮಗಾರಿ ನಡೆಯಲು ಬಿಡುವುದಿಲ್ಲ. ನಮ್ಮ ತಲೆ ಹೋದರೂ ಸರಿಯೇ ಜೆಸಿಬಿ ತಡೆಯುತ್ತೇವೆ. ತಪ್ಪು ಮಾಡಿದರೆ ಶಿಕ್ಷೆ ಕೊಡಲಿ. ಕೆಂಪನರಸಯ್ಯ ಅಂಗಡಿ ಮಾಲೀಕ ಈ ಭಾಗದ ಜನರು ಸರ್ವೀಸ್ ರಸ್ತೆಯಲ್ಲಿ ಓಡಾಡಬೇಕಿದೆ. ರಸ್ತೆ ಒತ್ತುವರಿ ತೆರವುಗೊಳಿಸುತ್ತಿದ್ದೇವೆ. ಮಾರ್ಕ್ ಮಾಡಿ ಅಂಗಡಿಯವರಿಗೇ ಒತ್ತುವರಿ ತೆರವು ಮಾಡಿಕೊಳ್ಳಲು ತಿಳಿಸಲಾಗಿದ್ದು, ಈಗ ಸ್ವಲ್ಪ ಕಾಲಾವಕಾಶ ಕೊಡಿ ಎನ್ನುತ್ತಿದ್ದಾರೆ. ನ್ಯಾಯಸಮ್ಮತವಾಗಿ ಒತ್ತುವರಿ ತೆರವುಗೊಳಿಸಿದ ಮೇಲೆ ಕಾಮಗಾರಿ ಆರಂಭವಾಗುತ್ತದೆ. ಯಾವುದೇ ಗೊಂದಲವಿಲ್ಲದೆ ಕಾಮಗಾರಿ ನಡೆಯಲಿದೆ. ಶ್ರೀನಿವಾಸ್ ಸ್ಥಳೀಯ ಕಾರ್ಪೋರೇಟರ್