ರಾಜ್ಯದಲ್ಲೇ ತುಮಕೂರು ಸ್ಮಾರ್ಟ್‌ಸಿಟಿ ನಂ.1

Tmk_Palike1 (1)
Published on

ತುಮಕೂರು: ಸ್ಮಾರ್ಟ್‌ಸಿಟಿ ಯೋಜನೆಯ ಅನುಷ್ಠಾನ ಹಾಗೂ ಅನುದಾನ ಸದ್ಬಳಕೆಯಲ್ಲಿ ತುಮಕೂರು ಸ್ಮಾರ್ಟ್ ಸಿಟಿ ರಾಜ್ಯದಲ್ಲಿ ನಂ.1 ಸ್ಥಾನ ಗಳಿಸಿದೆ. ದೇಶದ 100 ನಗರಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಜಾರಿಯಿದ್ದು, ರಾಜ್ಯದ 7 ಸ್ಮಾರ್ಟ್‌ಸಿಟಿಗಳಲ್ಲಿ ತುಮಕೂರು ಈ ವರ್ಷ ಪ್ರಥಮ ಸ್ಥಾನ ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಳೆದ ವರ್ಷ ದೇಶದಲ್ಲಿ 23ನೇ ಸ್ಥಾನದಲ್ಲಿದ್ದು, ಪ್ರಸ್ತುತ 9ನೇ ಸ್ಥಾನಕ್ಕೇರಿದೆ. ತುಮಕೂರು ಸೇರಿ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ನಗರಗಳಲ್ಲಿ

ಸ್ಮಾರ್ಟ್‌ಸಿಟಿ ಯೋಜನೆ ಜಾರಿಯಿದೆ.

ಸ್ಮಾರ್ಟ್‌ಸಿಟಿ ಮಿಷನ್ ಅಡಿಯಲ್ಲಿ ಅನುಷ್ಠಾನಗೊಳಿಸಲಾಗುವ ಯೋಜನೆಗಳ ಪ್ರಗತಿಯ ವೇಗ, ಅನುದಾನ ಸದ್ಬಳಕೆ ಹಾಗೂ ಇತರ ಮಾಹಿತಿಗಳನ್ನು ಆಧರಿಸಿ ರ‌್ಯಾಂಕಿಂಗ್ ನೀಡಲಾಗುತ್ತದೆ. ತುಮಕೂರು ಸ್ಮಾರ್ಟ್‌ಸಿಟಿಯು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಪ್ರಗತಿ, ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಸದ್ಬಳಕೆ ಹಾಗೂ ಇತರ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಾಲಕಾಲಕ್ಕೆ ಸಲ್ಲಿಸಲಾಗುತ್ತಿದ್ದು, ಈ ಎಲ್ಲ ಮಾಹಿತಿ ಆಧಾರದ ಮೇಲೆ ಕೇಂದ್ರ ಸರ್ಕಾರವು ಜೂ.12ರಂದು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಬೆಸ್ಟ್ ಎಂಡಿ: ಯೋಜನೆಗಳ ಅನುಷ್ಠಾನಕ್ಕೆ ವೇಗ ಹಾಗೂ ಗುಣಮಟ್ಟದ ಕಾಮಗಾರಿಗೆ ಒತ್ತುಕೊಡುವ ಮೂಲಕ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದ ಸ್ಮಾರ್ಟ್‌ಸಿಟಿ ಎಂಡಿ ಆಗಿದ್ದ ಟಿ.ಭೂಬಾಲನ್ 2019ರಲ್ಲಿ ಸ್ಮಾರ್ಟ್‌ಸಿಟಿ ಬೆಸ್ಟ್ ಎಂಡಿ, ಸಿಇಒ ಗೌರವಕ್ಕೆ ಭಾಜನರಾಗಿದ್ದರು. ಪ್ರಶಸ್ತಿ ಸ್ವೀಕರಿಸುವ ವೇಳೆ ಅವರನ್ನು ಗೋಕಾಕ್ ಉಪಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿತ್ತು.

ಬೆಂಗಳೂರಿಗೆ ಕೊನೆಯ ಸ್ಥಾನ : ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನ, ಅನುದಾನ ಸದ್ಬಳಕೆಯಲ್ಲಿ ರಾಜ್ಯ 7 ಸ್ಮಾರ್ಟ್‌ಸಿಟಿಗಳ ಪೈಕಿ ತುಮಕೂರು ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ಕೊನೇ ಸ್ಥಾನ, ದಾವಣಗೆರೆ 2ನೇ, ಶಿವಮೊಗ್ಗ 3ನೇ ಸ್ಥಾನಗಳಿಸಿದೆ. ಬೆಳಗಾವಿ 4ನೇ ಸ್ಥಾನ, ಹುಬ್ಬಳ್ಳಿ-ಧಾರವಾಡ 5ನೇ ಸ್ಥಾನ, ಮಂಗಳೂರು 6ನೇ ಸ್ಥಾನದಲ್ಲಿದೆ.

ಸ್ಮಾರ್ಟ್ ಸಿಟಿ ಎಲ್ಲ ಕಾಮಗಾರಿಗಳ ಪ್ರಗತಿ ಹೆಚ್ಚಿಸಿ ನಗರವನ್ನು ಸ್ಮಾರ್ಟ್ ಸಿಟಿ ಮಾಡಲು ಶ್ರಮವಹಿಸಲಾಗುವುದು. ಯೋಜನೆ ಅನುಷ್ಠಾನಲ್ಲಿ ಸಲಹೆ, ಸೂಚನೆ ನೀಡುತ್ತಿರುವ ಎಲ್ಲ ಜನಪ್ರತಿನಿಧಿಗಳಿಗೆ ತುಮಕೂರಿಗರ ಪರವಾಗಿ ಧನ್ಯವಾದಗಳು. ಟಿ.ಭೂಬಾಲನ್ ಎಂಡಿ, ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net