

ತುಮಕೂರು : ಕಳೆದ 4-5 ವರ್ಷಗಳಿಂದ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳಿಂದ ಹೈರಾಣಾಗಿಹೋಗಿದ್ದ ತುಮಕೂರಿಗರು ನಿಟ್ಟುಸಿರು ಬಿಡುವ ಕಾಲ ಸನ್ನಿಹಿತವಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ 151 ಯೋಜನೆಗಳನ್ನು ರೂಪಿಸಲಾಗಿದ್ದು ಈವರೆಗೆ 121 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ 30 ಯೋಜನೆಗಳು ಪ್ರಗತಿಯಲ್ಲಿದ್ದು ಡಿಸೆಂಬರ್ ಕೊನೆಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
2015ರ ಆ.27ರಂದು ಸ್ಮಾರ್ಟ್‌ಸಿಟಿ ಯೋಜನೆ ಅಡಿ ದೇಶದ 98 ನಗರಗಳನ್ನು ಅಭಿವೃದ್ಧಿಪಡಿಸಲು ಆಯ್ಕೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಗೆ ಆ ಸಂದರ್ಭದಲ್ಲಿ ತುಮಕೂರು ಸೇರಿ ರಾಜ್ಯದ 6 ನಗರಗಳು ಆಯ್ಕೆಯಾಗಿದ್ದವು. ಆದರೆ, ಮೊದಲ ಹಂತದಲ್ಲಿ ಆಯ್ಕೆಯಾಗುವಲ್ಲಿ ವಿಫಲವಾಗಿದ್ದ ತುಮಕೂರು 2016 ಸೆಪ್ಟೆಂಬರ್‌ನಲ್ಲಿ 2ನೇ ಹಂತದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿತ್ತು. ಆ ಮೂಲಕ ಸ್ಮಾರ್ಟ್‌ಸಿಟಿ ಕನಸು ಬಿತ್ತಲಾಗಿತ್ತು.
ಸ್ಮಾರ್ಟ್‌ಸಿಟಿ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಾನ ಅನುಪಾತದಲ್ಲಿ ಅನುದಾನ ನೀಡಿದ್ದು ಈ ಯೋಜನೆ ಅನುಷ್ಠಾನ, ನಿರ್ವಹಣೆ ಹೊಣೆಗಾರಿಕೆಯನ್ನು ಖಾಸಗಿ ಸ್ವರೂಪದ ಎಸ್‌ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್) ಕಂಪನಿ ವಹಿಸಿಕೊಂಡಿತ್ತು. 2019ರಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅಡಿ ಮೊದಲ ಕಾಮಗಾರಿ ಆರಂಭಿಸಲಾಗಿದ್ದು, ಈವರೆಗೆ 121 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಒಟ್ಟಾರೆ 928.23 ಕೋಟಿ ರೂ., ಮೊತ್ತದ ಯೋಜನೆಗಳನ್ನು ರೂಪಿಸಲಾಗಿದ್ದು 788 ಕೋಟಿ ರೂ., ಅನುದಾನ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿವೆ.
788 ಕೋಟಿ ರೂ., ಅನುದಾನ : ಯೋಜನೆಗೆ 1000 ಕೋಟಿ ರೂ., ಅನುದಾನ ಮೀಸಲಿಟ್ಟಿದ್ದು 928.23 ಕೋಟಿ ರೂ., ಅಂದಾಜು ವೆಚ್ಚದ ಯೋಜನೆಗಳನ್ನು ರೂಪಿಸಲಾಗಿತ್ತು. ಈವರೆಗೆ ಕೇಂದ್ರ ಸರ್ಕಾರದಿಂದ 392 ಕೋಟಿ ರೂ., ಹಾಗೂ ರಾಜ್ಯ ಸರ್ಕಾರದಿಂದ 396.28 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 601.44 ಕೋಟಿ ರೂಪಾಯಿ ಬಳಕೆಯಾಗಿದೆ. ಇಂಟಿಗ್ರೇಟೆಡ್ ಬಸ್‌ಸ್ಟಾೃಂಡ್ ಹೊರತುಪಡಿಸಿ ಬಹುತೇಕ ಕಾಮಗಾರಿಗಳು ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದ್ದು ಸ್ಮಾರ್ಟ್‌ಸಿಟಿ ಕನಸು ಬಹುತೇಕ ನನಸಾಗಲಿದೆ.
ಹೊರವರ್ತುಲ ರಸ್ತೆಗೆ 120 ಕೋಟಿ ರೂಪಾಯಿ : ಸ್ಮಾರ್ಟ್‌ಸಿಟಿ ಯೋಜನೆಯಡಿ ಒಟ್ಟಾರೆ 928.23 ಕೋಟಿ ರೂ., ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸದ್ಯ ಕೇಂದ್ರ ಸರ್ಕಾರವು 392 ಕೋಟಿ ರೂ., ರಾಜ್ಯ ಸರ್ಕಾರದ್ದು ಸೇರಿ ಒಟ್ಟು 788 ಕೋಟಿ ರೂ., ಅನುದಾನ ಹರಿದುಬಂದಿದೆ. ಈ ಅನುದಾನದಲ್ಲಿ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ, ಪಾರ್ಕ್ ಅಭಿವೃದ್ಧಿ, ಅಮಾನಿಕೆರೆಗೆ ನೀರು ಹರಿಯುವ ಪೈಪ್, ಕ್ರೀಡಾಂಗಣ, ಟ್ರಾಮಾ ಸೆಂಟರ್, ಇಂಟಿಗ್ರೇಟೆಡ್ ಬಸ್‌ಸ್ಟಾೃಂಡ್, ವಿಶ್ವದರ್ಜೆಯ ಹೊರವರ್ತುಲ ರಸ್ತೆ .. ಹೀಗೆ ಸ್ಮಾರ್ಟ್‌ಸಿಟಿಯಡಿ ದೊಡ್ಡ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಸ್ಮಾರ್ಟ್‌ಸಿಟಿ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಅಲ್ಲೊಂದು ಇಲ್ಲೊಂದು ಗುಣಮಟ್ಟದ ಅಪಸ್ವರದ ನಡುವೆಯೂ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಪೂರ್ಣಗೊಂಡಿವೆ. ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಜುಲೈನಲ್ಲಿ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಲೋಕಾರ್ಪಣೆ ಮಾಡಲಿದ್ದೇವೆ. ಜಿ.ಬಿ.ಜ್ಯೋತಿಗಣೇಶ್, ನಗರ ಶಾಸಕ ಈ ಜುಲೈಗೆ ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಇಂಟಿಗ್ರೇಟೆಡ್ ಬಸ್ ನಿಲ್ದಾಣ ಮುಂದಿನ ಮಾರ್ಚ್‌ನೊಳಗೆ ಮುಗಿಯಲಿದ್ದು 151 ಕಾಮಗಾರಿಗಳಲ್ಲಿ ಈವರೆಗೆ 121 ಯೋಜನೆಗಳು ಪೂರ್ಣಗೊಂಡಿವೆ. ಉಳಿದ 30 ಕಾಮಗಾರಿಗಳು ಪ್ರಗತಿಯಲ್ಲಿವೆ. ಬಿ.ಟಿ.ರಂಗಸ್ವಾಮಿ ಸ್ಮಾರ್ಟ್‌ಸಿಟಿ ಎಂಡಿ