

ವಿಜಯವಾಣಿ ಸುದ್ದಿಜಾಲ ಉಡುಪಿ
ಜೆಲ್ಲಿಕಲ್ಲು ಮಿಶ್ರಣ ಮಾಡಿ ಡಾಂಬರ್ ರಸ್ತೆ ಮಾಡುವುದು ತಿಳಿದಿದೆ. ಆದರೆ, ಉತ್ತಮವಾದ ಕಾಂಕ್ರೀಟ್ ರಸ್ತೆಯ ಮೇಲೆ ಜೆಲ್ಲಿಕಲ್ಲು ಬೀಳಿಸಿ, ವಾಹನ ಸವಾರರಿಗೆ ತೊಂದರೆ ಮಾಡುವುದುನ್ನು ಎಲ್ಲಾದರೂ ಕಂಡಿದ್ದೀರಾ?
ಪರ್ಕಳಕ್ಕೆ ಬನ್ನಿ. ಇಲ್ಲಿನ ಕೆನರಾ ಬ್ಯಾಂಕ್ ಸಮೀಪದ ಕೆಳಪರ್ಕಳದ ತಿರುವಿನ ಕಾಂಕ್ರೀಟ್ ರಸ್ತೆಯಲ್ಲಿ ರೆಡಿಮಿಕ್ಸ್ ವಾಹನವು ಯಥೇಚ್ಛವಾಗಿ ಸಿಮೆಂಟ್ ಮಿಶ್ರಿತ ಜೆಲ್ಲಿಕಲ್ಲನ್ನು ಬೀಳಿಸುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಈ ಹಿಂದೆಯೂ ಇದೇ ರೀತಿ ರಸ್ತೆಯ ಮೇಲೆ ಜೆಲ್ಲಿಕಲ್ಲು ಬೀಳಿಸುತ್ತ, ವಾಹನ ಸವಾರರಿಗೆ ತೊಂದರೆ ಆಗುತ್ತಿರುವ ಕುರಿತು ರೆಡಿಮಿಕ್ಸ್ ವಾಹನ ಓಡಿಸುವ ಚಾಲಕರಿಗೆ ಹಾಗೂ ಮಣಿಪಾಲದಲ್ಲಿರುವ ಕಂಪನಿಯ ಮಾಲೀಕರಿಗೆ ತಿಳಿಸಲಾಗಿತ್ತು. ಬಳಿಕ ರಸ್ತೆಯಲ್ಲಿ ಹರಡಿದ್ದ ಸಿಮೆಂಟ್ ಧೂಳನ್ನು ನೀರು ಹಾಯಿಸಿ ಸ್ವಚ್ಛ ಮಾಡಲಾಗಿತ್ತು. ಮತ್ತೆ ಈ ರೀತಿ ಜೆಲ್ಲಿ ಬೀಳಿಸಿ ವಾಹನ ಸಂಚಾರಕ್ಕೆ ತೊಂದರೆ ಮಾಡದಂತೆ ಸ್ಥಳೀಯರು ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಮತ್ತೆ ಅದೇ ಕಥೆ.
ಇದೇ ಮಾರ್ಗದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳೂ ಸಂಚರಿಸುತ್ತಾರೆ. ಸಿಮೆಂಟ್ ಧೂಳಿನಿಂದ ತೊಂದರೆ ಆಗುತ್ತಿದೆ. ಆದರೆ, ಯಾರೊಬ್ಬರೂ ಇಲ್ಲಾಗುತ್ತಿರುವ ಸಮಸ್ಯೆ ನಿವಾರಿಸಲು ಮುಂದಾಗಿಲ್ಲ. ಪೊಲೀಸ್ ಇಲಾಖೆಯವರು ಮೌನ ವಹಿಸಿದ್ದಾರೆ. ರಸ್ತೆ ಮೇಲೆ ಜೆಲ್ಲಿಕಲ್ಲು ಬೀಳಿಸಿ, ಸವಾರರ ಪ್ರಾಣಕ್ಕೆ ಅಪಾಯ ತರುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪರ್ಕಳದ ಮೋಹನದಾಸ್ ನಾಯಕ್ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಪರ್ಕಳದ ರಸ್ತೆಯಲ್ಲಿ ಜೆಲ್ಲಿಕಲ್ಲು ಹರಡಿಕೊಂಡಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಯಾರೂ ಹೇಳುವವರು, ಕೇಳುವವರು ಇಲ್ಲ ಎನ್ನುವಂತಾಗಿದೆ. ಜೆಲ್ಲಿಕಲ್ಲು ಬಿದ್ದಿರುವ ಭಾಗದಲ್ಲಿ ರಸ್ತೆ ಏರು ಹಾಗೂ ಇಳಿಜಾರು ಹೊಂದಿದ್ದು, ಬ್ರೇಕ್ ಹಾಕಿದರೆ ವಾಹನ ಸ್ಕಿಡ್ ಆಗಿ ಅಪಘಾತವಾಗುವ ಹಂತ ತಲುಪುತ್ತಿವೆ. ಪೊಲೀಸರು ಸೂಕ್ತಕ್ರಮ ಕೈಗೊಳ್ಳಬೇಕು. | ಗಣೇಶರಾಜ್ ಸರಳೆಬೆಟ್ಟು. ಸಾಮಾಜಿಕ ಕಾರ್ಯಕರ್ತ