

ಆಲ್ದೂರು: ಹೋಬಳಿಯ ಕೆಲವುಕಡೆ ವಾರದಿಂದ ಮಳೆಯಾಗುತ್ತಿರುವುದರಿಂದ ಸಣ್ಣ ಪುಟ್ಟ ಹಳ್ಳಗಳು ಮೈ ದುಂಬಿ ಹರಿಯುತ್ತಿವೆ. ಮಳೆ ಜತೆಗೆ ಗಾಳಿಯೂ ವೇಗವಾಗಿ ಬೀಸುತ್ತಿರುವುದರಿಂದ ಹಲವು ಭಾಗದಲ್ಲಿ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಮಸ್ಯೆ ಉಂಟಾಗಿದೆ. ಇನ್ನೂ ಕೆಲವು ಭಾಗದಲ್ಲಿ ರಸ್ತೆಗಳಿಗೆ ಮರಗಳು ಮುರಿದು ಬಿದ್ದು, ರಸ್ತೆ ಸಂಚಾರಕ್ಕೆ ಆಡಚಣೆ ಉಂಟಾಗಿದೆ.
ಆಲ್ದೂರು- ಚಿಕ್ಕಮಗಳೂರು ರಸ್ತೆಯ ತೋರಣಮಾವು ಸಮೀಪ ರಸ್ತೆಗೆ ಸಿಲ್ವರ್ ಮರ ಅಡ್ಡಲಾಗಿ ಬಿದ್ದು, ರಸ್ತೆ ಸಂಚಾರಕ್ಕೆ ಆಡಚಣೆಯಾಗಿತ್ತು. ಸಾರ್ವಜನಿಕರು ಮರಗಳನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಮೂಡಿಗೆರೆ-ಆಲ್ದೂರು ರಸ್ತೆಯ ಯಲಗುಡಿಗೆ ಗ್ರಾಮದ ತಿರುವಿನಲ್ಲಿ ರಸ್ತೆ ಬದಿಯ ಮರಗಳು ಮುರಿದು ಬಿದ್ದು, ವಿದ್ಯುತ್ ನಿಲುಗಡೆ ಜತೆಗೆ ರಸ್ತೆ ಸಂಚಾರಕ್ಕೂ ಆಡಚಣೆಯಾಗಿತ್ತು.
ಅಡ್ಡಮಕ್ಕಿ, ಕಂಚಿನಕಲ್ ದುರ್ಗಾ, ಹೊಸಳ್ಳಿ, ತೋರಣ ಮಾವು, ಪುರ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಒಟ್ಟು 15ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮಳೆ ಜತೆಗೆ ರಭಸವಾಗಿ ಶೀತಗಾಳಿ ಬೀಸುತ್ತಿದ್ದು ,ಆಲ್ದೂರು ಭಾಗದ ಬೀರಂಜಿ ಹಳ್ಳ ಮೈದುಂಬಿ ಹರಿಯುತ್ತಿದೆ. ಇನ್ನೂ ಕೆಲವು ಭಾಗದಲ್ಲಿ ಗದ್ದೆಗಳು ಕೆರೆಗಳಂತಾಗಿದೆ, ಕಾಫಿ ತೋಟ ಹಾಗೂ ರಸ್ತೆ ಬದಿಯ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು, ಬಾರಿ ಹಾನಿ ಉಂಟಾಗಿದೆ.
ಮಲೆನಾಡಿನ ಕೆಲವು ಗ್ರಾಮಗಳಲ್ಲಿ ಕತ್ತಲೆ ಅವರಿಸಿದ್ದು, ಗ್ರಾಮಸ್ಥರು ಮೆಸ್ಕಾಂ ಸಿಬ್ಬಂದಿಗಳ ಜತೆ ಕೈ ಜೋಡಿಸಿ ವಿದ್ಯುತ್ ಕಂಬಗಳ ದುರಸ್ತಿಗೆ ಮುಂದಾಗಿದ್ದಾರೆ.