ಒಂದು ದಿನದ ಯೋಗ, ದೇಹಕ್ಕೆ ಲಭಿಸದು ಸುಯೋಗ

UDP-20-5-Yoga
ತ್ರಿಕೋನಾಸನ.
Published on

ಇಂದು ಅಂತಾರಾಷ್ಟ್ರೀಯ ಯೋಗ ದಿನ

ವಿಜಯವಾಣಿ ಸುದ್ದಿಜಾಲ ಉಡುಪಿ
ಯೋಗ ಅಥವಾ ಯೋಗಾಸನ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಾ ಶಾಖೆಯಾಗಿದೆ. ಹಿಂದು, ಬೌದ್ಧ ಮತ್ತು ಜೈನ ಧರ್ಮಗಳಲ್ಲಿ ಯೋಗವನ್ನು ಧ್ಯಾನದ ಆಚರಣೆಯ ಸಂದರ್ಭದಲ್ಲಿ ಬಳಕೆ ಮಾಡುತ್ತಿರುವುದು ಇತಿಹಾಸದಿಂದ ತಿಳಿದುಬರುತ್ತದೆ.

ಹಿಂದು ತತ್ವಶಾಸ್ತ್ರದಲ್ಲಿ ರಾಜಯೋಗ, ಜ್ಞಾನ ಯೋಗ, ಭಕ್ತಿ ಯೋಗ ಮತ್ತು ಹಠಯೋಗ ಎಂಬುದಾಗಿ ಯೋಗದ ಪ್ರಮುಖ ಶಾಖೆಗಳಾಗಿ ಗುರುತಿಸಲಾಗುತ್ತದೆ. ಭಾರತೀಯ ತತ್ವಜ್ಞಾನದ ಪ್ರಕಾರದ ಯೋಗ ಎನ್ನುವುದು ಆರು ಸಾಂಪ್ರದಾಯಿಕ ಶಾಖೆಗಳಲ್ಲಿ ಒಂದು. ಋಷಿ ಪತಂಜಲಿ ಅವರನ್ನು ಔಪಚಾರಿಕವಾಗಿ ಯೋಗ ತತ್ವಜ್ಞಾನದ ಸ್ಥಾಪಕರೆಂದು ಮನ್ನಣೆ ನೀಡಲಾಗಿದೆ. ಮನಸ್ಸಿನ ನಿಯಂತ್ರಣದ ರಾಜಯೋಗ ಪತಂಜಲಿ ಯೋಗ ಅಥವಾ ಪತಂಜಲಿ ಯೋಗಸೂತ್ರ ಎನ್ನಲಾಗುತ್ತದೆ.

ಮತ್ತೊಮ್ಮೆ ಬೆಳಕಿಗೆ

ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಮತ್ತೊಮ್ಮೆ ಭಾರತದ ಯೋಗದ ಮಹತ್ವ ಜಗತ್ತಿನ ಗಮನ ಸೆಳೆದಿದೆ. ಪ್ರತಿವರ್ಷ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ಅವರು ಕರೆ ನೀಡಿದ್ದಾರೆ. ಇದರಿಂದ ಯೋಗಾಸನ ಮತ್ತು ಪ್ರಾಣಾಯಾಮದ ಪ್ರಯೋಜನ ಮತ್ತೊಮ್ಮೆ ದೇಶವಾಸಿಗರಿಗೆ ತಿಳಿಯುವಂತಾಗಿದೆ. ಯೋಗ ಒಂದು ದಿನದ ಕಾರ್ಯಕ್ರಮ ಆಗಬಾರದು. ಸರಿಯಾದ ಪ್ರಯೋಜನ ಪಡೆಯಲು ಅದನ್ನು ನಿಯಮಿತ ಅಭ್ಯಾಸವಾಗಿ ಅಳವಡಿಸಿಕೊಳ್ಳಬೇಕು.

UDP-20-5B-Yoga
ಪ್ರಸರಿತ ಪಾದೋತ್ತನಾಸನ.

ಯುವಶಕ್ತಿಗಿಲ್ಲ ಆಸಕ್ತಿ

ಕೋವಿಡ್​ ಸಂದರ್ಭದಲ್ಲಿ ಎಲ್ಲರೂ ರೋಗನಿರೋಧಕ ಶಕ್ತಿಗಾಗಿ ಪ್ರಾಣಾಯಾಮ ಅಭ್ಯಾಸ ಮಾಡಿದ್ದರು. ಆದರೆ, ಹೆಚ್ಚಿನ ಜನರು ಅಷ್ಟೇ ವೇಗವಾಗಿ ಯೋಗಾಭ್ಯಾಸ ಮರೆತಿದ್ದಾರೆ. ಇತ್ತೀಚೆಗಿನ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಅಸಿಡಿಟಿ ಸಮಸ್ಯೆ, ಖಿನ್ನತೆ, ಆತಂಕದಂತಹ ಕಾಯಿಲೆ ಹೆಚ್ಚುತ್ತಿದೆ. ಇವುಗಳನ್ನು ಯೋಗಾಸನಗಳಿಂದ ಪರಿಹರಿಸಿಕೊಳ್ಳಬಹುದು. ಇದಕ್ಕೆ ಇಚ್ಛಾಶಕ್ತಿ ಬೇಕಾಗುತ್ತದೆ. ಆದರೆ, ಇಂದಿನ ಯುವಶಕ್ತಿಗೆ ಎಲ್ಲವೂ ತಕ್ಷಣ ಮತ್ತು ತ್ವರಿತವಾಗಿ ಆಗಬೇಕೆಂಬ ಮನೋಭಾವದಿಂದ ಯೋಗಕ್ಕೆ ಹಿನ್ನಡೆ ಆಗಿದೆ.


ಆರೋಗ್ಯಕರ ಸಮಾಜಕ್ಕೆ ಕೊಡುಗೆ

ನಮ್ಮ ಆಂತರಿಕ ಅಂಗಗಳು ಆರೋಗ್ಯವಾಗಿರಲು ಯೋಗದ ನಿಯಮಿತ ಅಭ್ಯಾಸ ಅಗತ್ಯ. ಯಾವುದೇ ವಯಸ್ಸಿನವರು ಅಭ್ಯಾಸ ಮಾಡಬಹುದಾದ ಸರಳ, ಸೂಕ್ಷ್ಮ ವ್ಯಾಯಾಮವು ಅನೇಕ ಮಾರಕ ಕಾಯಿಲೆಗಳನ್ನೂ ವಾಸಿಮಾಡಬಲ್ಲದು. ಸಂಧಿವಾತ, ಹೆಪ್ಪುಗಟ್ಟಿದ ಭುಜ, ಮೊಣಕೈ ನೋವುಗಳನ್ನು ನಿವಾರಿಸಬಲ್ಲದು. ವಕ್ರಾಸನ, ಅರ್ಧಮತ್ಸೇಂದ್ರಾಸನ, ನೌಕಾಸನ, ಧನುರಾಸನಗಳು ಮಧುಮೇಹ ಕಾಯಿಲೆ ನಿಯಂತ್ರಿಸಬಲ್ಲದು. ಸರಿಯಾದ ಆಹಾರ ಪದ್ಧತಿಯೊಂದಿಗೆ ಚಿಕ್ಕ ವಯಸ್ಸಿನಲ್ಲಿಯೇ ಯೋಗ ಅಭ್ಯಾಸ ಮಾಡಿದರೆ ಮುಂದೆ ಬರಬಹುದಾದ ರೋಗವನ್ನೂ ದೂರವಿಡಬಹುದು. ಇನ್ನೊಂದು ಪ್ರಮುಖ ಸಮಸ್ಯೆಯಾದ ಒತ್ತಡ ಸಂಬಂಧಿತ ಕಾಯಿಲೆಗಳನ್ನು ಪ್ರಾಣಾಯಾಮದಿಂದ ನಿಯಂತ್ರಿಸಬಹುದು. ಆರೋಗ್ಯವೇ ಸಂಪತ್ತು. ಆರೋಗ್ಯಕರ ದೇಹ ಮತ್ತು ಶಿಸ್ತಿನ ಮನಸ್ಸು ಆರೋಗ್ಯಕರ ಸಮಾಜಕ್ಕೆ ಕೊಡುಗೆ ನೀಡುತ್ತದೆ ಎನ್ನುತ್ತಾರೆ ಯೋಗ ತರಬೇತುದಾರೆ ಶೋಭಾ ಶೆಟ್ಟಿ. (ಮೊ. 6361852877)

UDP-20-5A-Yoga
ಮಕ್ಕಳಿಗೆ ಯೋಗಾಭ್ಯಾಸ ಕಲಿಸುತ್ತಿರುವ ಶೋಭಾ ಶೆಟ್ಟಿ.

ಕನಿಷ್ಠ 3 ತಿಂಗಳ ಕಾಲ ಸರಿಯಾದ ಮಾರ್ಗದರ್ಶನದಲ್ಲಿ ಯೋಗ ಅಭ್ಯಾಸ ಮಾಡಿದರೆ ಈ ಕಲೆ ಮೈಗೂಡಿಕೊಳ್ಳುತ್ತದೆ. ಆಗ ಮಾತ್ರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದಲ್ಲಿ ಧನಾತ್ಮಕ ಬದಲಾವಣೆ ಕಾಣಲು ಸಾಧ್ಯ. ಎಷ್ಟೋ ಜನರು ಸಮಸ್ಯೆ ಎದುರಾದಾಗ ಯೋಗದಿಂದ ಪರಿಹಾರ ಕಂಡುಕೊಳ್ಳಲು ಬರುತ್ತಾರೆ. ಇದು ಸರಿಯಲ್ಲ. ಅನೇಕ ಬಗೆಯ ದೈಹಿಕ ವ್ಯಾಧಿ ವಾಸಿಯಾಗಲು ಯೋಗ ರಾಮಬಾಣವಾಗಿದೆ. ಶೋಭಾ ಶೆಟ್ಟಿ, ತರಬೇತುದಾರೆ.ಓಂಕಾರ ಯೋಗ ಸೆಂಟರ್​. ಇಂದ್ರಾಳಿ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net