

ಶಿವಮೊಗ್ಗ: ರಾಗಿಗುಡ್ಡದಲ್ಲಿ ನಡೆದಿರುವುದು ಒಂದು ಸಣ್ಣ ಘಟನೆ. ಅದನ್ನು ಯಾರೂ ವೈಭವೀಕರಿಸಬಾರದು. ಶಾಂತಿಗೆ ಭಂಗ ಉಂಟು ಮಾಡಬಾರದು. ಎಲ್ಲರೂ ಸೇರಿ ಶಾಂತಿ ಕಾಪಾಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.
ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದೆ. ಯಾವುದೇ ಧರ್ಮವನ್ನು ಪರಿಗಣಿಸದೇ ಹಲವರನ್ನು ಬಂಧಿಸಲಾಗಿದೆ. ಯಾವ ಧರ್ಮದವರನ್ನೂ ಓಲೈಸುವ ಪ್ರಶ್ನೆಯೇ ಇಲ್ಲ. ಆದರೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮತ್ತು ಶಾಸಕ ಎಸ್.ಎನ್.ಚನ್ನಬಸಪ್ಪ ಕಾಂಗ್ರೆಸ್ ಮೇಲೆ ತಪ್ಪು ಹೊರಿಸುವ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬಿಜೆಪಿ ನಾಯಕರಿಗೆ ನಾನು ಈ ಬಗ್ಗೆ ಮನವಿ ಮಾಡುತ್ತೇನೆ. ತಪ್ಪು ಮಾಡಿದವರು ಯಾರೇ ಆಗಲಿ ಅವರಿಗೆ ಶಿಕ್ಷೆ ಖಚಿತ. ಜಿಲ್ಲಾ ಉಸ್ತುವಾರಿ ಸಚಿವರು ರಾಗಿಗುಡ್ಡಕ್ಕೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ವಿಚಾರಿಸಿದ್ದಾರೆ. ಹೊರಗಡೆಯಿಂದ ಬಂದವರು ಕಲ್ಲು ತೂರಾಟ ನಡೆಸಿರುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ನಗರ ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ಮೆಹಕ್ ಶರೀಫ್, ಯುಮನಾ ರಂಗೇಗೌಡ, ಪ್ರಮುಖರಾದ ಎನ್.ಡಿ.ಪ್ರವೀಣ್‌ಕುಮಾರ್, ಚಂದ್ರಭೂಪಾಲ ಇತರರಿದ್ದರು