ಜೇನು ಕುಟುಂಬಗಳಿಗೆ ಸ್ಮಾಲ್ ಹೈವ್ ಬೀಟಲ್ ಕೀಟ ಕಂಟಕ: ಬೆಂಗಳೂರು ಕೃಷಿ ವಿವಿ ಅಧ್ಯಯನದಲ್ಲಿ ಪತ್ತೆ

gkvk - honey bee
Published on

ಬೆಂಗಳೂರು: ಥೈಸ್ಯಾಕ್ ಬ್ರೂಡ್ ವೈರಾಣು ರೋಗ ಹಾವಳಿಯಿಂದ ಬಳಲಿರುವ ರಾಜ್ಯದ ಜೇನು ಸಾಕಾಣಿಕೆ ಉದ್ಯಮಕ್ಕೆ ‘ಸ್ಮಾಲ್ ಹೈವ್ ಬೀಟಲ್ ’ಎಂಬ ಹೊಸ ಕೀಟ ಕಂಟಕವಾಗಿ ಪರಿಣಮಿಸಿದೆ. ಇದರ ನಿವಾರಣೆಗಾಗಿ ನೆರೆರಾಜ್ಯಗಳಿಂದ ಮೆಲ್ಲಿಪೆರಾ ತಳಿ ಖರೀದಿಸದಂತೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಜೇನು ಕೃಷಿಕರಿಗೆ ಸಲಹೆ ನೀಡಿದೆ.

ಇತ್ತೀಚೆಗೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಮೆಲ್ಲಿಪೆರಾ ತಳಿಯ ಜೇನು ಕುಟುಂಬಕ್ಕೆ ಸ್ಮಾಲ್ ಹೈವ್ ಬೀಟಲ್ ಕೀಟ ಕಂಡು ಬಂದಿದ್ದು 20,000ಕ್ಕೂ ಹೆಚ್ಚು ಜೇನು ಕುಟುಂಬಗಳು ನಾಶವಾಗಿವೆ. ಈ ಕೀಟದ ವ್ಯಾಪಕ ಹಾವಳಿ ಕುರಿತು ಬೆಂಗಳೂರು ಕೃಷಿ ವಿವಿಯ ಜೇನುಕೃಷಿ ವಿಜ್ಞಾನಿಗಳ ತಂಡವು ಒಂದು ವರ್ಷದ ಕಾಲ ವಿವಿಧ ಜಿಲ್ಲೆಗಳಲ್ಲಿ ಕಂಟಕ ಕೀಟಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡಿದೆ.

ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮೆಲ್ಲಿಫೆರಾ ಮತ್ತು ತುಡುವೆ ಜೇನು ಕುಟುಂಬಗಳಲ್ಲಿ ಈ ಕಂಟಕ ಕೀಟ ಪತ್ತೆಯಾಗಿವೆ. ಮೈಸೂರು ಜಿಲ್ಲೆಯ 6 ಸ್ಥಳಗಳಲ್ಲಿ 480 ತುಡುವೆ ಜೇನು ಕುಟುಂಬಗಳನ್ನು ಪರೀಕ್ಷಿಸಿದಾಗ ಶೇ.58.33 ಕೀಟಬಾಧೆಯ ಪ್ರಮಾಣವಿದ್ದು 280 ಜೇನು ಕುಟುಂಬಗಳು ಗೂಡು ಬಿಟ್ಟು ಪಲಾಯನವಾಗಿವೆ. ಈ ಕಂಟಕ ಕೀಟದ ಮರಿಹುಳುಗಳು ಜೇನು ಕುಟುಂಬಕ್ಕೆ ಹೆಚ್ಚು ಹಾನಿ ಮಾಡುತ್ತದೆ. ಜೇನುಗೂಡುಗಳಲ್ಲಿ ಪರಾಗ, ಜೇನುತುಪ್ಪ ಮತ್ತು ಸತ್ತ ಜೇನುನೊಣಗಳನ್ನು ತಿನ್ನುತ್ತಾ ಜೀವಿಸುವ ಸಣ್ಣ ಕಂದು-ಕಪ್ಪು ಬಣ್ಣದ ಜೀರುಂಡೆಯಾಗಿದೆ. ಮರಿಹುಳು ಹಂತವು ಎರಿಗಳಲ್ಲಿನ ಜೇನುತುಪ್ಪ ಮತ್ತು ಪರಾಗ ತಿನ್ನುವ ಮೂಲಕ ಸಕ್ರಿಯವಾಗಿ ಜೇನುಗೂಡುಗಳಿಗೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ. ಜೇನುಗೂಡಿನ ಎರಿಗಳಲ್ಲಿ ಮರಿ ಹುಳುಗಳು ಮಲವಿಸರ್ಜನೆ ಮಾಡುವುದರಿಂದ ಜೇನುತುಪ್ಪದ ಬಣ್ಣ ಕಂದು ಬಣ್ಣಕ್ಕೆ ತಿರುಗುತ್ತದೆ ಮತ್ತು ಹುಳಿಯಾಗುವಿಕೆಗೆ ಕಾರಣವಾಗುತ್ತವೆ ಎಂದು ವಿವಿ ತಿಳಿಸಿದೆ.

ಮೆಲ್ಲಿಪೆರಾ ತಳಿ ಖರೀದಿ ನಿಲ್ಲಿಸಲು ಸೂಚನೆ:

ರೈತರು ಜೇನುನೊಣಗಳ ಕುಟುಂಬಗಳಲ್ಲಿ ಸ್ಮಾಲ್ ಹೈವ್ ಬೀಟಲ್ ಬಾಧೆಯ ಕುರಿತು ಪರಿಶೀಲನೆ ಮಾಡಿ ಕ್ವಾರಂಟೈನ್ ಕ್ರಮ ಜಾರಿಗೊಳಿಸಿ ಸೋಂಕಿತ ಕುಟುಂಬಗಳ ವರ್ಗಾವಣೆ ನಿರ್ಬಂಧಿಸಬೇಕು. ಪಕ್ಕದ ರಾಜ್ಯಗಳಿಂದ ಸೋಂಕಿತ ಜೇನುನೊಣಗಳ ಕುಟುಂಬಗಳನ್ನು (ಮೆಲ್ಲಿಪೆರಾ) ಖರೀದಿ ನಿಲ್ಲಿಸಬೇಕು. ಎಲ್ಲ ಸೋಂಕಿತ ಜೇನುಗೂಡುಗಳನ್ನು ಸ್ವಚ್ಛಗೊಳಿಸುವುದು, ಸೋಂಕಿತ ಖಾಲಿ ಏರಿಗಳನ್ನು ಸುಟ್ಟು ಹಾಕುವುದು ಅಥವಾ ಅಗತ್ಯ ಇದ್ದಲ್ಲಿ ಪರಿಸರಸ್ನೇಹಿ ಕೀಟನಾಶಕ ಸಿಂಪಡಿಸುವುದರಿಂದ ಕೀಟ ಬಾಧೆಯನ್ನು ಹತೋಟಿ ಮಾಡಬಹುದು ಎಂದು ಜೇನು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net