ಹುಬ್ಬಳ್ಳಿ: ಹಕ್ಕುಪತ್ರ ವಿತರಣೆ ಪ್ರಕ್ರಿಯೆ ಸರ್ಕಾರ ನಿಗದಿಪಡಿಸಿದ ಕಾಲಮಿತಿಯೊಳಗೆ ನಡೆಯಬೇಕು, ಎಲ್ಲ ಫಲಾನುಭವಿಗಳಿಗೆ ಕೂಡಲೇ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಸೂಚಿಸಿದರು.
ಬೆಂಗಳೂರಿನ ಸ್ಲಮ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ಮಂಡಳಿಯು ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಹಕ್ಕುಪತ್ರಗಳ ಮಂದಗತಿ ವಿತರಣೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಇದು ಗಂಭೀರ ವಿಷಯ. ಸರ್ಕಾರದ ಆದೇಶದನ್ವಯ ರಾಜ್ಯಾದ್ಯಂತ ಸರ್ಕಾರಿ ಮತ್ತು ಸ್ಧಳಿಯ ಸಂಸ್ಧೆಗಳ ಮಾಲೀಕತ್ವದಲ್ಲಿರುವ 1821 ಘೋಷಿತ ಕೊಳಗೇರಿ ಪ್ರದೇಶಗಳಲ್ಲಿ ವಾಸವಾಗಿರುವ 3.36 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಹೇಳಿದರು.
ಮಂಡಳಿಯಿಂದ ಕೊಳಗೇರಿ ನಿವಾಸಿಗಳ ಸಮೀಕ್ಷೆ ಕಾರ್ಯಕೈಗೊಂಡು ಈ ವರೆಗೆ 68,415 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಕೇಂದ್ರ ಪುರಸತ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1,80,253 ಮನೆಗಳ ನಿರ್ಮಾಣ ಕಾಮಗಾರಿಗಳನ್ನು ವಿವಿಧ ಕೊಳಗೇರಿ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಇವುಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯ ಬಗ್ಗೆ ಪರಿಶೀಲಿಸಿ, ಹಕ್ಕುಪತ್ರ ವಿತರಣೆಯಲ್ಲಿ ವಿಳಂಭವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಜುಲೈ 2024ರ ಅಂತ್ಯದೊಳಗೆ 34,744 ಮನೆಗಳ ಕಾಮಗಾರಿ ಪೂರ್ಣಗೊಳಿಸಿ, ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷ ಕಾರ್ಯಕ್ರಮದ ಮೂಲಕ ಈ ಮನೆಗಳನ್ನು ಮುಖ್ಯಮಂತ್ರಿಯವರಿಂದ ಲೋಕಾರ್ಪಣೆ ಮಾಡುವ ಗುರಿ ಇದೆ ಎಂದು ತಿಳಿಸಿದರು.
ಟೆಂಡರ್ ಕರಾರಿನಂತೆ ನಿಗದಿತ ಅವಧಿಯೊಳಗೆ ನಿರ್ವಹಿಸುವಲ್ಲಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ನೋಟೀಸ್ ಜಾರಿ ಮಾಡಲು ಹಾಗೂ ಕಾಮಗಾರಿ ನಿರ್ವಹಿಸುವಲ್ಲಿ ವಿಫಲವಾದ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್ (ಕಪ್ಪು ಪಟ್ಟಿ) ಸೇರ್ಪಡೆಗೊಳಿಸಲು ಸೂಚಿಸಿದರು.
ಡಿಸೆಂಬರ್ 2024ರ ಅಂತ್ಯದೊಳಗೆ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ಕ್ರಮ ವಹಿಸಲು ಮಂಡಳಿಯ ಆಯುಕ್ತರಿಗೆ ತಿಳಿಸಿದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಸ್ಥಾಪನೆಯಾಗಿ 50 ವರ್ಷ ಕಳೆದಿದ್ದು, ವಸತಿ ಯೋಜನೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮವನ್ನು ಕೊಳಗೇರಿ ನಿವಾಸಿಗಳಿಗೆ ಪಾರದರ್ಶಕವಾಗಿ ತಲುಪಿಸುವ ನಿಟ್ಟಿನಲ್ಲಿ ಮಂಡಳಿಯ ಎಲ್ಲ ಚಟುವಟಿಕೆಗಳನ್ನು ಗಣಕೀಕರಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆಯುಕ್ತ ಡಾ. ಅಶೋಕ ಡಿ.ಆರ್, ಮುಖ್ಯ ಇಂಜಿನಿಯರ್ ಎನ್.ಪಿ. ಬಾಲರಾಜು ಮತ್ತು ತಾಂತ್ರಿಕ ನಿರ್ದೇಶಕರು, ಮಂಡಳಿ ನಿರ್ದೇಶಕರು, ಸದಸ್ಯರು ಭಾಗವಹಿಸಿದ್ದರು.