

ಕಾರವಾರ:ಇಲ್ಲಿನ ಬೈತಖೋಲ್ ಮೀನುಗಾರಿಕೆ ಬಂದರಿನಲ್ಲಿ ಹೂಳು ತುಂಬಿದ್ದು, ದೋಣಿಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಸಮುದ್ರದ ಇಳಿತದ ಸಮಯದಲ್ಲಿ ಕೆಲವು ದೋಣಿಗಳು ಹೂಳಿನಲ್ಲಿ ಸಿಲುಕಿ ಮಗುಚಿ ಬಿದ್ದ ಘಟನೆಯೂ ನಡೆದಿದೆ. ಇದರಿಂದ ಮೀನುಗಾರಿಕೆ ಕಷ್ಟವಾಗುತ್ತಿದೆ ಎಂಬುದು ಮೀನುಗಾರರ ಗೋಳು.
ಬಂದರಿನ ಹೂಳು ತೆಗೆಯಲು ಈಗಾಗಲೇ ಟೆಂಡರ್ ಆಗಿದ್ದು, ಸಿಆರ್‌ಜಡ್ ಅನುಮತಿ ಸಿಗದ ಕಾರಣ ಹೂಳು ತೆಗೆಯಲು ಸಾಧ್ಯವಾಗಿಲ್ಲ .ಸಿಆರ್‌ಜಡ್ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಎಂದು ಇಲಾಖೆ ಹೇಳುತ್ತಿದೆ.
ಬಿಜೆಪಿ ಒತ್ತಾಯ:
ಮೀನುಗಾರಿಕಾ ಬಂದರಿನಲ್ಲಿ ಹೂಳು ತುಂಬಿಕೊಂಡಿದ್ದರಿಂದ ಮೀನುಗಾರರು ತೀವ್ರ ತೊಂದರೆಗೊಳಗಾಗಿದ್ದಾರೆ. ಸರಾಗವಾಗಿ ಮೀನುಗಾರಿಕೆ ನಡೆಸಲಾಗದೆ ಅವರ ಜೀವನ ನಿರ್ವಹಣೆಯ ಮೇಲೆ ದುಷ್ಪರಿಣಾಮ ಉಂಟಾಗಿದೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿನ ಶಾಸಕಿ ರೂಪಾಲಿ ಎಸ್.ನಾಯ್ಕ ಅವಧಿಯಲ್ಲಿ ಅವರ ಪ್ರಯತ್ನದಿಂದ 3.50 ಕೋಟಿ ರೂಪಾಯಿ ಕಾರವಾರ ಬಂದರು ಹೂಳೆತ್ತಲು ಹಣ ಮಂಜೂರಾಗಿತ್ತು. ಭೂಮಿ ಪೂಜೆ ಸಹ ನೆರವೇರಿತ್ತು. ಆದರೆ, ಸಿಆರ್‌ಜಡ್ ಸಮಸ್ಯೆ ಎದುರಾಗಿದೆ ಎನ್ನುತ್ತಿದ್ದಾರೆ. ಈಗ ಮೀನುಗಾರಿಕೆ ಸಚಿವರೂ ಜಿಲ್ಲೆಯವರೇ ಆಗಿರುವುದರಿಂದ ಹಾಗೂ ಸ್ವತಃ ಮೀನುಗಾರ ಸಮುದಾಯಕ್ಕೆ ಸೇರಿರುವವರೂ ಆಗಿರುವುದರಿಂದ ಕಾನೂನು ತೊಡಕನ್ನು ಶೀಘ್ರದಲ್ಲಿ ನಿವಾರಿಸಿ ಮೀನುಗಾರಿಕಾ ಬಂದರಿನಲ್ಲಿ ಹೂಳು ತೆಗೆಯಲು ಕ್ರಮ ಕೈಗೊಳ್ಳಬೇಕು ಹಾಗೂ ಮೀನುಗಾರರ ಬೇಡಿಕೆಗೆ ಸ್ಪಂದಿಸಬೇಕೆಂದು ಎಂದು ಬಿಜೆಪಿಗರು ಒತ್ತಾಯಿಸಿದ್ದಾರೆ.
ಜತೆಗೆ ಮುದಗಾ, ಬೇಲೆಕೇರಿ ಬಂದರುಗಳಲ್ಲೂ ಹೂಳನ್ನು ಎತ್ತುವ ಮೂಲಕ ಮೀನುಗಾರಿಕೆಗೆ ಅನುಕೂಲ ಮಾಡಿಕೊಡಬೇಕು ಎಂದು ಬಿಜೆಪಿ ಕಾರವಾರ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ, ನಗರ ಘಟಕದ ಅಧ್ಯಕ್ಷ ನಾಗೇಶ ಕುರ್ಡೇಕರ ಹಾಗೂ ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಬಿಜೆಪಿ ನಗರ ಉಪಾಧ್ಯಕ್ಷ ಕಿಶೋರ್ ತಾಂಡೇಲ್,ಮಹೇಂದ್ರ ಬಾನಾವಳಿಕರ್, ನಗರಸಭೆ ಸದಸ್ಯೆ ರೋಷನಿ ಮಾಲಸೇಕರ್, ಮಹಿಳಾ ಮೋರ್ಚಾ ಅಧ್ಯಕ್ಷೆ ವೃಂದಾ ದಾಮಸಡೇಕರ್, ಪ್ರಧಾನ ಕಾರ್ಯದರ್ಶಿ ವೈಶಾಲಿ ತಾಂಡೇಲ್ ಹಾಗೂ ಸುನೀತಾ ಸಾರಂಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಿತಿ ರಚನೆ
ಕರ್ನಾಟಕದ 320 ಕಿಮೀ ಕಡಲ ತೀರವಿದ್ದು, 13 ಮೀನುಗಾರಿಕೆ ಬಂದರುಗಳಿವೆ. ಅವುಗಳ ಅಭಿವೃದ್ಧಿಗೆ ಏಕ ಕಾಲದಲ್ಲಿ ಸಿಆರ್‌ಜಡ್ ಅನುಮತಿ ಪಡೆಯಲು ಯೋಜಿಸಿದ್ದು, ಈ ಸಂಬಂಧ ಈಗಾಗಲೇ ಸಮಿತಿ ರಚಿಸಲಾಗಿದೆ. ಮೀನುಗಾರರಿಗೆ ತೊಂದರೆಯಾಗದ ರೀತಿಯಲ್ಲಿ ಶೀಘ್ರ ಹೂಳೆತ್ತಲು ಕ್ರಮ ವಹಿಸಲಾಗುವುದು ಎಂದು ಮೀನುಗಾರಿಕೆ ಸಚಿವ ಮಂಕಾಳ ಎಸ್.ವೈದ್ಯ ತಿಳಿಸಿದ್ದಾರೆ.