ದೆಹಲಿಗೆ ಅಲ್ಲ,ಬೆಂಗಳೂರಿಗೆ ಬುಲಾವ್ ಬಂದಿದೆ; ಸಚಿವ ಜಾರಕಿಹೊಳಿ ಹೇಳಿಕೆ

IMG-20240924-WA0010.jpg
Published on

ಬೆಳಗಾವಿ:ಮುಡಾ ಪ್ರಕರಣದಲ್ಲಿ ಹೈಕೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿ ವಜಾಗೊಳಿಸಿರುವ ಹಿನ್ನೆಲೆ ಪಕ್ಷದ ವರಿಷ್ಠರು ಸೆ.25ರಂದು ಶಾಸಕಾಂಗ ಸಭೆ ಕರೆದಿದ್ದಾರೆ. ಹಾಗಾಗಿ ಬೆಂಗಳೂರಿಗೆ ಬರಲು ಬುಲಾವ್ ಬಂದಿದೆ ವಿನಃ ದೆಹಲಿಗೆ ಬರಲು ಅಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಪಕ್ಷದ ಹೈಕಮಾಂಡ್ ಸೇರಿ ಸಚಿವರು, ಶಾಸಕರು ಅವರ ಬೆಂಬಲಕ್ಕೆ ನಿಂತಿದ್ದೇವೆ ಎಂದರು.

ಸಿದ್ದರಾಮಯ್ಯ ಪರವಾಗಿ ವಿಶ್ವಾಸ ವ್ಯಕ್ತಪಡಿಸಲು ಶಾಸಕಾಂಗ ಸಭೆ ಕರೆಯಲಾಗಿದೆ. ಎಲ್ಲ ಜನಪ್ರತಿನಿಧಿಗಳ ಮೇಲೆ ನಾನಾ ರೀತಿಯ ಕೇಸ್‌ಗಳಿವೆ. ಹಾಗಂತ ಎಲ್ಲರೂ ರಾಜೀನಾಮೆ ಕೊಟ್ಟಿದ್ದಾರೆ? ಹಾಗಾಗಿ ಸಿದ್ದರಾಮಯ್ಯ ರಾಜೀನಾಮೆ ಏಕೆ ಕೊಡಬೇಕು? ವಾಲ್ಮೀಕಿ ಮತ್ತು ಮುಡಾ ಪ್ರಕರಣಗಳು ಬೇರೆ ಬೇರೆ. ಸಿದ್ದರಾಮಯ್ಯ ಅವರೇ ಮುಂದುವರಿಯಬೇಕು ಎಂಬ ಒತ್ತಡ ಇದೆ ಎಂದರು.

ಮುಡಾ ಪ್ರಕರಣದಲ್ಲಿ ಹೈಕೋರ್ಟ್ ಮುಖ್ಯಮಂತ್ರಿ ವಿರುದ್ಧ ತನಿಖೆ ಮುಂದುವರಿಸಲು ಆದೇಶಿಸಿದೆ. ಹಾಗಾಗಿ ಮೊದಲು ತನಿಖೆ ನಡೆದು ಯಾರ‌್ಯಾರು ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಬೇಕು. ಅಲ್ಲಿಯವರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದರು.

ಶಾಸಕ ಆಸೀಫ್ ಸೇಠ್, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net