ಜಾರುತ್ತಿದೆ ಬೀಚ್ ಬಂಡೆ ! ಪ್ರವಾಸಿಗರಿಗೆ ಎಚ್ಚರಿಕೆ...

beach
ತ್ರಾಸಿ-ಮರವಂತೆ ಬೀಚ್‌ನಲ್ಲಿ ಪೊಲೀಸರ ಎಚ್ಚರಿಕೆ ನಡುವೆಯೂ ಸೀವಾಕ್ ಮೇಲೆ ಪ್ರವಾಸಿಗರು
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಆರಂಭವಾದ ಮಳೆ, ಬಿರುಸುಗೊಳ್ಳುತ್ತಿರುವ ಕಡಲ ಅಬ್ಬರದ ನಡುವೆ ವಿಶ್ವಖ್ಯಾತಿಯ ತ್ರಾಸಿ-ಮರವಂತೆ ಬೀಚ್ ಪ್ರವಾಸಿಗರನ್ನು ಸೆಳೆಯುತ್ತಿದೆ. ಹೆದ್ದಾರಿಗೆ ಹೊಂದಿಕೊಂಡಿರುವ ಬೀಚ್ ಆಕರ್ಷಣೀಯ ಕೇಂದ್ರ ಬಿಂದು.

ಬೀಚ್‌ನಲ್ಲಿ ರೂಪಿಸಲ್ಪಟ್ಟಿರುವ ಟಿ-ಸೇಫ್ ಮಾದರಿಯ ಸೀವಾಕ್ ಸದ್ಯ ಪ್ರವಾಸಿಗರಿಗೆ ಎಚ್ಚರ ನೀಡುತ್ತಿದೆ. ಟೀ-ಸೇಫ್ ಮಾದರಿಯ ಸೀವಾಕ್‌ನ ಬಂಡೆಕಲ್ಲು, ಟೆಟ್ರಾಪೋಡ್‌ಗಳಲ್ಲಿ ದಟ್ಟ ಪಾಚಿ ಕಟ್ಟಿದ್ದು, ಅಲೆ ಮತ್ತು ಕಡಲ ಸೌಂದರ್ಯ ಸವಿಯಲು ಇಲ್ಲಿ ಹೆಜ್ಜೆ ಇರಿಸುವ ಪ್ರವಾಸಿಗರು ಎಚ್ಚರ ವಹಿಸುವಂತೆ ಪೊಲೀಸ್ ಮತ್ತು ತಾಲೂಕು ಆಡಳಿತ ಎಚ್ಚರಿಸಿದೆ.

ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ

ತ್ರಾಸಿ-ಮರವಂತೆ ಬೀಚ್‌ನಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ನಡೆದಿರುವ ಟಿ-ಸೇಫ್ ತಡೆಗೋಡೆ ಮರವಂತೆ ಬೀಚ್‌ನ ಸೌಂದರ್ಯ ಇಮ್ಮಡಿಗೊಳಿಸಿದೆ. ಆದರೆ ಈ ತಡೆಗೋಡೆ ಕಲ್ಲುಗಳು ಅಲೆಯ ಹೊಡೆತಕ್ಕೆ ಸಿಲುಕಿ ಹಸಿರು ಪಾಚಿಗಳಿಂದ ಆವರಿಸಿಕೊಂಡಿದೆ. 600 ಮೀಟರ್ ಅಂತರದ ಬೀಚ್ ವ್ಯಾಪ್ತಿಯಲ್ಲಿರುವ ಎಲ್ಲ ತಡೆಗೋಡೆಯ ಬಂಡೆಗಳಲ್ಲಿ ದಪ್ಪನಾದ ಪಾಚಿ ಕುಳಿತಿದೆ. ಕಡಲ ಸೌಂದರ್ಯ ವೀಕ್ಷಿಸಲೆಂದು ಬರುವ ಮಂದಿ ತಡೆಗೋಡೆ ಬಂಡೆಯ ಮೇಲೆ ಹೆಜ್ಜೆಯಿರಿಸಿ ಮೈಮರೆತರೆ ಕಡಲಿಗೆ ಆಹಾರವಾಗುವ ಆತಂಕ ಈಗ ಮನೆ ಮಾಡಿದೆ.

ಪೊಲೀಸರ ಹರಸಾಹಸ

ವಾರಾಂತ್ಯದಲ್ಲಿ ತ್ರಾಸಿ-ಮರವಂತೆ ಕಡಲ ತೀರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಸುಮಾರು 1.5 ಕಿ.ಮೀ ಉದ್ದದ ಈ ಕಡಲ ತೀರದಲ್ಲಿ ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮಳೆಗಾಲದ ಈ ಸಂದರ್ಭ ಕಡಲಿಗಿಳಿಯದಂತೆ ಮತ್ತು ಟಿ-ಸೇಫ್ ಮಾದರಿಯ ಸೀವಾಕ್ ಮೇಲೆ ಸಂಚರಿಸದಂತೆ ಪೊಲೀಸರು, ಕರಾವಳಿ ಕಾವಲು ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಪ್ರವಾಸಿಗರನ್ನು ಎಚ್ಚರಿಸಿ ದಡಕ್ಕೆ ಬರುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರವಾಸಿಗರು ಮಾತ್ರ ತಮಗಿಷ್ಟ ಬಂದಂತೆ ಮಾಡುತ್ತಿರುವುದು ವಿಪರ್ಯಾಸವೇ ಸರಿ.

ಎಚ್ಚರಿಕೆಯ ಸಂದೇಶ

ತ್ರಾಸಿ-ಮರವಂತೆ ಬೀಚ್‌ನುದ್ದಕ್ಕೂ ಪೊಲೀಸ್ ಇಲಾಖೆ ಎಚ್ಚರಿಕೆಯ ನಾಮಫಲಕ ಅಳವಡಿಸಿದೆ. ಸಂದೇಶ ಪಾಲಿಸಿಕೊಂಡು ಕಡಲ ಸೌಂದರ್ಯ ಸವಿಯುವಂತೆ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net