

ಬೆಳಗಾವಿ: ಮಳೆಗಾಲದಲ್ಲಿ ಪ್ರವಾಸಿಗಳನ್ನು ತನ್ನತ್ತ ಸೆಳೆದುಕೊಳ್ಳುವ ರಮಣೀಯ ತಾಣ, ಸಮುದ್ರ ಮಟ್ಟದಿಂದ 690 ಮೀಟರ್ ಎತ್ತರದಲ್ಲಿ ಪರ್ವತ ಶ್ರೇಣಿಗಳ ಮಧ್ಯೆ ಧುಮ್ಮಿಕ್ಕುವ ಅಂಬೋಲಿ ಜಲಪಾತ ಮಾನ್ಸೂನ್‌ನಿಂದ ಈ ಬಾರಿ ಮತ್ತೆ ಮೈದುಂಬಿದೆ. ಆದರೆ, ಕ್ಷೀರದಂತೆ ಹರಿಯುತ್ತಿರುವ ಜಲಪಾತದ ಸೊಬಗು ನೋಡುವ ಅವಕಾಶ ಪ್ರವಾಸಿಗರಿಗಿಲ್ಲ. ಕಾರಣ, ಕರೊನಾ….
ಬೆಳಗಾವಿಯಿಂದ 60 ಕಿ.ಮೀ. ದೂರದಲ್ಲಿರುವ ಅಂಬೋಲಿ ಜಲಪಾತ ದೇಶ-ವಿದೇಶದ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಆದರೆ, ಗಡಿ ಪಕ್ಕದಲ್ಲೇ ಇರುವ ಮಹಾರಾಷ್ಟ್ರ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಕರ್ನಾಟಕ-ಮಹಾರಾಷ್ಟ್ರ ಸಂಪರ್ಕಿಸುವ ಗಡಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಹೀಗಾಗಿ ಅಂಬೋಲಿ ಜಲಪಾತದ ಸೌಂದರ್ಯ ಸವಿಯಲು ಹೋಗಬಯಸುವ ಪ್ರಕೃತಿ ಪ್ರಿಯರಿಗೆ ತೊಡಕಾಗಿದೆ.
ಜಲಲ ಧಾರೆ: ಪಶ್ಚಿಮ ಘಟ್ಟಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಸಾವಂತವಾಡಿ ತಾಲೂಕಿನ ಅಂಬೋಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಈವರೆಗೆ 850ಕ್ಕೂ ಹೆಚ್ಚು ಮಿಲಿ ಮೀಟರ್ ಮಳೆ ದಾಖಲಾಗಿದೆ. ಇದರಿಂದ ಅಂಬೋಲಿ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ. ಹಸಿರಿನ ಮಧ್ಯೆ ಗೋಚರಿಸುತ್ತಿರುವ ಜಲಲ ಧಾರೆಯ ಸೊಬಗನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅಂಬೋಲಿ ಜಲಪಾತ ಹಾಗೂ ಘಾಟ್ ವೀಕ್ಷಿಸಲು ಕಳೆದ ವರ್ಷ ಬೆಳಗಾವಿ ಸಾರಿಗೆ ಸಂಸ್ಥೆಯಿಂದ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೀಗಾಗಿ ಅಂಬೋಲಿ ಜತೆಗೆ ಹಸಿರು ವನಸಿರಿ, ಮೈಮನ ತಣಿಸುವ ಕವಳಾಶೇತ್, ಬಾಬಾ ಾಲ್ಸ್, ಹಿರಣ್ಯಕೇಶಿ ದೇವಸ್ಥಾನ, ತಿಲ್ಲಾರಿ ಫಾಲ್ಸ್, ಸ್ವಪ್ನವೇಲ್ ಪಾಯಿಂಟ್ ಹಾಗೂ ಇನ್ನಿತರ ರಮಣೀಯ ಪ್ರದೇಶ ನೋಡಬಹುದಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಇಲ್ಲಿ ಜನದಟ್ಟಣೆ ಇರುತ್ತದೆ. ಕಾಲೇಜ್ ಯುವಕ-ಯುವತಿಯರು, ಕುಟುಂಬ ಸಮೇತ ಆಗಮಿಸುವವರು, ಚಿಣ್ಣರು-ಹಿರಿಕಿರಿಯರು ಸೇರಿ ದಿನವೂ ಸಾವಿರಾರು ಜನರು ಸೇರುತ್ತಿದ್ದರು. ಆದರೆ, ಕರೊನಾ ವೈರಸ್ ಭಯದಿಂದ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ.
ಮಹಾರಾಷ್ಟ್ರ ಗಡಿಯನ್ನು ಮಾರ್ಚ್ 23ರಿಂದ ಜೂನ್ 23ರ ವರೆಗೆ ಮುಚ್ಚಲಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲೂ ಕರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಗಡಿ ಪ್ರಾರಂಭವಾಗಲು ಇನ್ನೂ ಸಮಯ ಬೇಕಾಗಬಹುದು. ಆದರೆ, ಬೆಳಗಾವಿಯಿಂದ ಅಂಬೋಲಿಗೆ ತೆರಳುವ ಪ್ರವಾಸಿಗರಿಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಕೋರುತ್ತೇನೆ. ಪ್ರವಾಸಿಗರು ದೈಹಿಕ ಅಂತರ ಕಾಪಾಡಿಕೊಳ್ಳಲು ಒತ್ತು ನೀಡಬೇಕು.| ಜಗದೀಶ ಪಾಟೀಲ ಪ್ರಭಾರ ಉಪನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ಬೆಳಗಾವಿ
8 ವರ್ಷದಿಂದ ಗೆಳೆಯರೆಲ್ಲ ಸೇರಿ ಪ್ರತಿವರ್ಷವೂ ಮಳೆಗಾಲದಲ್ಲಿ ಅಂಬೋಲಿ ಾಲ್ಸ್, ಕವಳಾಶೇತ್ ಹಾಗೂ ಬಾಬಾ ಾಲ್ಸ್ಗೆ ತೆರಳುತ್ತೇವೆ. ಈ ವರ್ಷ ಮಹಾರಾಷ್ಟ್ರ ಗಡಿ ಮುಚ್ಚಿರುವುದರಿಂದ ಪ್ರವಾಸೋದ್ಯಮ ಅಧಿಕಾರಿಗಳು ನಮಗೆ ಅನುಕೂಲ ಮಾಡಿಕೊಟ್ಟರೆ ಈ ವರ್ಷವೂ ಅಂಬೋಲಿಗೆ ಭೇಟಿ ನೀಡುತ್ತೇವೆ. | ಸಂತೋಷ ಬಡಿಗೇರ ಬೆಳಗಾವಿ
| ಧರ್ಮರಾಜ ಪಾಟೀಲ