

ವಿಜಯವಾಣಿ ಸುದ್ದಿಜಾಲ ಉಡುಪಿ
ಸಮಾಜದಲ್ಲಿ ಎಷ್ಟೋ ಜನರಿಗೆ ವಾಸ್ತವ್ಯಕ್ಕೆ ಸ್ವಂತ ಮನೆ ಇಲ್ಲದೆ ಪರದಾಡುತ್ತಾರೆ. ಅಂತಹವರಿಗಾಗಿ ಉಡುಪಿ ಧರ್ಮಪ್ರಾಂತ್ಯದಲ್ಲಿ ಮನೆ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಸ್ವಂತ ಸೂರಿದ್ದರೆ ಮಾತ್ರ ನೆಮ್ಮದಿಯ ನಿದ್ದೆ ಬರಲು ಸಾಧ್ಯ. ಹೀಗಾಗಿ ಧರ್ಮಾಧ್ಯಕ್ಷರ ಹೊಸ ಯೋಜನೆಯಂತೆ ಧರ್ಮಪ್ರಾಂತ್ಯದಲ್ಲಿರುವ 52 ಚರ್ಚ್‌ಗಳ ವ್ಯಾಪ್ತಿಯಲ್ಲಿರುವ ಬಡವರಿಗೆ ಮನೆ ನಿರ್ಮಿಸಿ ಕೊಡಲಾಗುವುದು ಎಂದು ತೊಟ್ಟಂ ಚರ್ಚ್‌ನ ಗುರು ಡೆನಿಸ್ ಡೆಸಾ ತಿಳಿಸಿದರು.
ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ದೇವಾಲಯ ಚರ್ಚ್ ವ್ಯಾಪ್ತಿಯ ವಿನೋದ ಮತ್ತು ಅಂಜೆಲಿನ್ ಪಿಂಟೊ ಕುಟುಂಬಕ್ಕೆ ಚರ್ಚ್‌ನ ಪಾಲನಾ ಮಂಡಳಿ, ಮೈಕಲ್ ಡಿಸೋಜ ಚಾರಿಟಿ ಟ್ರಸ್ಟ್ ಹಾಗೂ ದಾನಿಗಳ ನೆರವಿನೊಂದಿಗೆ 13 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ‘ಆರ್ಕ್ ಆಫ್ ಹೋಪ್’ ಮನೆಯನ್ನು ಭಾನುವಾರ ಹಸ್ತಾಂತರಿಸಿ ಮಾತನಾಡಿದರು.
ಮನೆ ನಿರ್ವಾಣಕ್ಕೆ 5 ಸೆಂಟ್ಸ್ ಜಾಗ ಉಚಿತವಾಗಿ ನೀಡಿದ ಥೋಮಸ್ ಮತ್ತು ವಲೇರಿಯಾನ ನೊರೊನ್ಹಾ ದಂಪತಿ, ಮನೆ ನಿರ್ಮಿಸಿದ ಇಂಜಿನಿಯರ್ ಎರೋಲ್, ಯೋಜನೆ ಸಾಕಾರಾಗೊಳ್ಳಲು ನೇತೃತ್ವ ವಹಿಸಿದ್ದ ಧರ್ಮಗುರುಗಳನ್ನು ಸನ್ಮಾನಿಸಲಾಯಿತು.
ಚರ್ಚ್‌ನ ಪಾಲನಾ ಮಂಡಳಿ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್, ಕಾನ್ವೆಂಟ್‌ನ ಮುಖ್ಯಸ್ಥೆ ಸುಷ್ಮಾ, ಮೈಕಲ್ ಡಿಸೋಜ ಚಾರಿಟಿ ಟ್ರಸ್ಟ್‌ನ ಸದಸ್ಯರಾದ ಸ್ಟೀಫನ್ ಪಿಂಟೊ, ಓಸ್ವಲ್ಡ್ ರೊಡ್ರಿಗಸ್, ಸಂತ ವಿನ್ಸೆಂಟ್ ದಿ ಪಾವ್ಲ್ ಸೊಸೈಟಿ ಉಡುಪಿ-ಕಲ್ಯಾಣಪುರ ವಲಯದ ಪದಾಧಿಕಾರಿಗಳಾದ ವಿನ್ಸೆಂಟ್ ಕ್ವಾಡ್ರಸ್, ರಿಚ್ಚಾರ್ಡ್ ಡಿಸೋಜ, ತೊಟ್ಟಂ ಟಕದ ಅಧ್ಯಕ್ಷ ಸುಸಾನ್ನಾ ವಾಸ್, ಸಂತ ಸೆಬೆಸ್ಟಿಯನ್ ವಾರ್ಡ್‌ನ ಗುರಿಕಾರ ರೊನಾಲ್ಡ್ ಫೆರ್ನಾಂಡಿಸ್, ಬಡಾನಿಡಿಯೂರು ಗ್ರಾಪಂ ಸದಸ್ಯ ಜೊಸೇಫ್ ಪಿಂಟೊ ಇತರರಿದ್ದರು.
ವಿನೋದ ಪಿಂಟೊ ಸ್ವಾಗತಿಸಿದರು. ವೆನಿಸ್ಸಾ ಪಿಂಟೊ ವಂದಿಸಿದರು. ಲೆಸ್ಲಿ ಆರೋಜಾ ನಿರೂಪಿಸಿದರು.