ಎಸ್‌ಎಲ್‌ಬಿ, ಎಚ್‌ಎಂಶಿ ಎಲ್ಲರಿಗೂ ಪ್ರೇರಣೆ

ಎಸ್‌ಎಲ್‌ಬಿ, ಎಚ್‌ಎಂಶಿ ಎಲ್ಲರಿಗೂ ಪ್ರೇರಣೆ
Published on

ಹಾಸನ: ಪ್ರಪಂಚದಲ್ಲಿ ಕೋಟ್ಯಂತರ ಜನ ಹುಟ್ಟುತ್ತಾರೆ. ಕೋಟ್ಯಂತರ ಜನ ಸಾಯುತ್ತಾರೆ. ಆದರೆ, ಕೆಲವರು ತಮ್ಮ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ ಅಂತಹವರ ಸಾಲಿನಲ್ಲಿ ಎಸ್.ಎಲ್. ಭೈರಪ್ಪ ಹಾಗೂ ಎಚ್.ಎಂ.ಶಿವಣ್ಣ ನಿಲ್ಲುತ್ತಾರೆ ಎಂದು ಪುಷ್ಪಗಿರಿ ಮಠದ ಶ್ರೀಸೋಮಶೇಖರ ಸ್ವಾಮೀಜಿ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಮತ್ತು ಸ್ವಾತಂತ್ರೃ ಹೋರಾಟಗಾರ ಎಚ್.ಎಂ.ಶಿವಣ್ಣ ಅವರಿಗೆ ಶುಕ್ರವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜಿಲ್ಲೆಯ ಇಬ್ಬರು ಮಹಾನ್ ವ್ಯಕ್ತಿಗಳು ನಮ್ಮನ್ನು ಅಗಲಿರುವುದು ನೋವಿನ ಸಂಗತಿ. ಆದರೆ ಅವರ ಆದರ್ಶ ಮತ್ತು ಮಾರ್ಗದರ್ಶನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.

ಬೈರಪ್ಪ ಅವರು ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತರಾದವರಲ್ಲ. ಆದರೆ, ಅವರನ್ನು ನಾವು ಆ ರೀತಿ ಕಾಣುವ ಮೂಲಕ ಸಣ್ಣತನವನ್ನು ತೋರ್ಪಡಿಕೆ ಮಾಡಿದ್ದೇವೆ. ಅಂತಹ ಮನಸ್ಥಿತಿಗಳು ನಮ್ಮಿಂದ ದೂರವಾಗಬೇಕು. ಅವರ ಆದರ್ಶ ಮತ್ತು ಅವರ ತತ್ವಗಳು ಮಕ್ಕಳಿಗೆ ಪ್ರೇರಣೆಯಾಗಬೇಕು. ಅವರ ಕಾದಂಬರಿಗಳಲ್ಲಿ ನಾವು ಜೀವನದ ಮೌಲ್ಯವನ್ನು ಮತ್ತು ಸಮಾಜದ ಕಟ್ಟುಪಾಡುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದರು.

ವಿಶ್ವ ಒಕ್ಕಲಿಗ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಈ ಜಿಲ್ಲೆಯ ಇಬ್ಬರು ಗಣ್ಯರನ್ನು ಕಳೆದುಕೊಂಡಿದ್ದೇವೆ. ಆದರೆ, ಅವರ ತತ್ವ ಆದರ್ಶಗಳು ನಮಗೆ ಪ್ರೇರಣೆ. ಮುಂದಿನ ದಿನಗಳಲ್ಲಿ ಇಬ್ಬರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸುವ ಮೂಲಕ ಆ ರೀತಿ ಕೆಲಸ ಮಾಡಿರುವವರನ್ನು ಸನ್ಮಾನಿಸುವ ಕೆಲಸಗಳು ನಡೆಯಲಿ ಎಂದು ಹೇಳಿದರು.

ಗಾಂಧಿ ಭವನ ನಿರ್ಮಾಣವಾಗಬೇಕಾದರೆ ಎಚ್.ಎಂ. ಶಿವಣ್ಣ ಅವರ ಪಾತ್ರ ಪ್ರಮುಖವಾದುದು. ಒಂದು ಸರ್ಕಾರ ಮಾಡದೆ ಇದ್ದದ್ದನ್ನು ಒಬ್ಬ ವ್ಯಕ್ತಿ ಸರ್ಕಾರ ಮತ್ತು ಅಧಿಕಾರಿಗಳನ್ನು ಹಿಡಿದು ಕೆಲಸ ಮಾಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಎಸ್.ಎಲ್.ಭೈರಪ್ಪ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಲ್ಲದೆ ಇಡೀ ಭಾರತದ ಸಾಹಿತ್ಯ ಲೋಕಕ್ಕೆ ಹಲವಾರು ಕೃತಿ ಮತ್ತು ಕಾದಂಬರಿಗಳನ್ನು ನೀಡುವ ಮೂಲಕ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಚಿಂತನೆ ಬರಹಗಳು ಪ್ರಸ್ತುತ ಸಮಾಜದಲ್ಲಿ ಸಾಕಷ್ಟು ಪರ-ವಿರೋಧಗಳ ನಡುವೆಯೂ ನೇರ ನಿಷ್ಠುರವಾದಿಯಾಗಿ ತಮ್ಮ ಬರವಣಿಗೆಗಳ ಮೂಲಕವೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದರು.

ಭೈರಪ್ಪ ಅವರು ಎಡವು ಅಲ್ಲ, ಬಲವು ಅಲ್ಲ, ನೇರವಾದಿ, ಕ್ರಾಂತಿಕಾರಿ. ಶಿವಣ್ಣ ಅವರು ಅಪ್ಪಟ ಗಾಂಧಿ ವಾದಿ. ಆದರೆ, ಭೈರಪ್ಪನವರು ವಿಚಾರವಾದಿ. ಇಬ್ಬರ ತತ್ವಗಳು ಮತ್ತು ಆದರ್ಶಗಳು ಬೇರೆ ಬೇರೆಯಾಗಿದ್ದರು ಕೂಡ ಅವರ ಸೇವೆ ಸಮಾಜಕ್ಕೆ ಅಪಾರವಾಗಿದೆ ಎಂದು ಬಣ್ಣಿಸಿದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಸೂತಕದ ದಿನ ಮತ್ತು ಕರಾಳ ದಿನವಾಗಿದೆ. ಎಸ್.ಎಲ್.ಭೈರಪ್ಪ ಮತ್ತು ಎಚ್.ಎಂ.ಶಿವಣ್ಣ ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವನ್ನುಂಟಾಗಿದೆ. ಭೈರಪ್ಪ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಶಿವಣ್ಣ ಅವರು ಕೂಡ ಸ್ವಾತಂತ್ರೃ ಹೋರಾಟಗಾರರಾಗಿ ಜಿಲ್ಲೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.

ಶಾಸಕ ಎಚ್.ಪಿ.ಸ್ವರೂಪ್ ಮಾತನಾಡಿ, ನಮ್ಮ ಜಿಲ್ಲೆಯ ಇಬ್ಬರು ಮಹಾನ್ ವ್ಯಕ್ತಿಗಳನ್ನು ಕಳೆದುಕೊಂಡಿದ್ದೇವೆ. ಅವರ ಆದರ್ಶ, ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆಯ ಮಹಾಪೌರ ಗಿರೀಶ್ ಚನ್ನವೀರಪ್ಪ ಮಾತನಾಡಿ, ಇಬ್ಬರ ಗಣ್ಯರ ಹೆಸರನ್ನು ನಗರದ ಯಾವುದಾದರೂ ರಸ್ತೆಗೆ ಹೆಸರನ್ನು ಇಡುವ ಮೂಲಕ ಅವರ ಅವರ ತತ್ವ ಆದರ್ಶಗಳ ಜತೆಗೆ ಅವರನ್ನು ನೆನಪಿಸುವ ಕೆಲಸವನ್ನ ಮಾಡೋಣ ಎಂದು ಹೇಳಿದರು.

ಮಾಜಿ ಶಾಸಕ ಹಾಗೂ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಆರ್. ಗುರುದೇವ್ ಮಾತನಾಡಿ, ನಾನು ಎಂಎಲ್‌ಎ ಆಗಿದ್ದ ಸಂದರ್ಭದಲ್ಲಿ ಎಚ್.ಎಂ.ಶಿವಣ್ಣ ಸಕಲೇಶಪುರದಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ಗೆ ಜಾಗ ನೀಡುವಂತೆ ಮನವಿ ಮಾಡಿದ್ದರು. ಭೈರಪ್ಪ ಅವರ ಎಲ್ಲ ಪುಸ್ತಕಗಳನ್ನು ಓದಿದ್ದೇನೆ. ಅವರು ಅಧ್ಯಯನ ಮಾಡಿಕೊಂಡು ಬರೆಯುತ್ತಿದ್ದರು ಎಂಬುದು ಸಂತೋಷದ ವಿಚಾರ ಎಂದರು.

ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್. ಮುದ್ದೇಗೌಡ, ಪ್ರಗತಿಪರ ಚಿಂತಕ ಆರ್.ಪಿ. ವೆಂಕಟೇಶಮೂರ್ತಿ, ಬುಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್, ಮಾಜಿ ಶಾಸಕ ಬಿ.ವಿ. ಕರಿಗೌಡ, ಜಾನಪದ ತಜ್ಞ ಹಂಪನಳ್ಳಿ ತಿಮ್ಮೇಗೌಡ, ಮಹಾನಗರ ಪಾಲಿಕೆಯ ಉಪಮೇಯರ್ ಹೇಮಲತಾ ಕಮಲ್‌ಕುಮಾರ್, ಸಂಗಮೇಶ್ವರ ಸ್ವಾಮೀಜಿ, ಕೆ.ಟಿ.ಶಿವಪ್ರಸಾದ್, ಐಸಾಮಿಗೌಡ, ವಾರ್ತಾಧಿಕಾರಿ ಮೀನಾಕ್ಷಿ, ಎಚ್.ಪಿ. ಮೋಹನ್, ನಾಯಕರಹಳ್ಳಿ ಮಂಜೇಗೌಡ, ರವಿ ನಾಕಲಗೂಡು, ಚೈತ್ರ ನಾಯಕರಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net