ವಧಾಗೃಹ ನಿರ್ಮಾಣಕ್ಕೆ ಸಾರ್ವಜನಿಕ ಹಿತರಕ್ಷಣಾ ವೇದಿಕೆ ವಿರೋಧ

180220 Gangavathi Hirejantkal Kasahikhane Protest
Published on

ಗಂಗಾವತಿ: ನಗರದ ಹಿರೇಜಂತಕಲ್ ಸಮೀಪ ನಿರ್ಮಿಸುತ್ತಿರುವ ಕಸಾಯಿಖಾನೆ (ವಧಾಗೃಹ) ಕಾಮಗಾರಿ ನಿರ್ಮಾಣ ಕೈಬಿಡುವಂತೆ ಒತ್ತಾಯಿಸಿ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಸದಸ್ಯರು ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಹಿರೇಜಂತಕಲ್‌ನ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯದಿಂದ ಉದ್ದೇಶಿತ ಸ್ಥಳಕ್ಕೆ ಪ್ರತಿಭಟನೆ ರ‌್ಯಾಲಿ ಮೂಲಕ ತೆರಳಿ, ಸ್ಥಳದಲ್ಲಿ ಕೆಲಕಾಲ ಪ್ರತಿಭಟಿಸಿ, ಪೌರಾಯುಕ್ತ ಶೇಖರಪ್ಪ ಈಳಿಗೇರ್‌ರಿಗೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಮಾತನಾಡಿ, ಹಿರೇಜಂತಕಲ್ ಸಮೀಪದ ಸ.ನಂ.363/2 ಪ್ರದೇಶದಲ್ಲಿ ನಿರ್ಮಿಸುತ್ತಿರುವ ಕಸಾಯಿಖಾನೆ ಜನ ವಿರೋಧಿ ನಿಲುವಾಗಿದೆ. ಪುರಾತನ ದೇವಾಲಯಗಳ ಸಮೀಪದಲ್ಲೇ ವಧಾಗೃಹ ನಿರ್ಮಿಸುತ್ತಿರುವುದು ಸರಿಯಲ್ಲ. ಕಸಾಯಿಖಾನೆಯ ತ್ಯಾಜ್ಯಗಳು ಕಾಲುವೆಯಲ್ಲಿ ಸೇರಿಕೊಳ್ಳುವ ಸಾಧ್ಯತೆಗಳೂ ಇವೆ. ಇದರಿಂದ ಸುತ್ತಮುತ್ತಲಿನ ಪ್ರದೇಶದ ಜತೆಗೆ ದೇವಾಲಯದ ಪಾವಿತ್ರ್ಯಕ್ಕೂ ಧಕ್ಕೆಯಾಗಲಿದೆ. ದೇವಾಲಯ ಮತ್ತು ಜನವಸತಿ ಪ್ರದೇಶದ ಸನಿಹದಲ್ಲಿ ಕಸಾಯಿಖಾನೆ ನಿರ್ಮಿಸಬಾರದೆಂಬ ಕಾಯ್ದೆಯಿದ್ದರೂ ನಗರಸಭೆ ಅಧಿಕಾರಿಗಳ ತಪ್ಪು ಮಾಹಿತಿಯಿಂದ ಕಸಾಯಿಖಾನೆ ನಿರ್ಮಿಸಲಾಗುತ್ತಿದೆ. ಒಳಚರಂಡಿ ಕಾಮಗಾರಿಗಾಗಿ ಖರೀದಿಸಿದ ಭೂಮಿಯಲ್ಲಿ ಕಸಾಯಿಖಾನೆ ನಿರ್ಮಿಸುವುದು ಸರಿಯಲ್ಲ. ಈ ನಿರ್ಧಾರವನ್ನು ಕೂಡಲೇ ಪರಿಶೀಲಿಸಿ ಕಸಾಯಿಖಾನೆ ನಿರ್ಮಾಣ ಕೈಬಿಡಬೇಕು. ಇಲ್ಲದಿದ್ದರೆ ಹಂತಹಂತವಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವೇದಿಕೆ ಸಂಚಾಲಕ ವಿನಯ್ ಪಾಟೀಲ್, ಅಧ್ಯಕ್ಷ ಮಲ್ಲಪ್ಪ ರಾಮಸಾಗರ, ಉಪಾಧ್ಯಕ್ಷ ಸೋಮಶೇಖರಗೌಡ, ಕಾರ್ಯದರ್ಶಿ ತಿಮ್ಮಣ್ಣ ಛಲವಾದಿ, ಕಾಡಾದ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ಮುಖಂಡರಾದ ಎಸ್.ರಾಘವೇಂದ್ರ ಶ್ರೇಷ್ಠಿ, ಅಯ್ಯನಗೌಡ ಹೇರೂರು, ವೀರೇಶ ಬಲ್ಕುಂದಿ, ರಾಘವೇಂದ್ರ ಮಾನಳ್ಳಿ, ಸಂಗಮೇಶ ಅಯೋಧ್ಯಾ, ಮಲ್ಲಿಕಾರ್ಜುನಗೌಡ ಹೊಸ್ಮನಿ ಇತರರು ಇದ್ದರು.

ಐತಿಹಾಸಿಕ ಹಿನ್ನೆಲೆಯ ದೇವಾಲಯ ಮತ್ತು ವಸತಿ ಪ್ರದೇಶದಲ್ಲಿ ಕಸಾಯಿಖಾನೆ ನಿರ್ಮಿಸಲು ಅವಕಾಶ ನೀಡಲ್ಲ. ಈ ವಿಚಾರವನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ 24ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ನಿರ್ಲಕ್ಷಿಸಿದರೆ ಗಂಗಾವತಿ ಬಂದ್‌ಗೆ ಕರೆ ನೀಡಲಾಗುವುದು.
| ಸಿಂಗನಾಳ ವಿರೂಪಾಕ್ಷಪ್ಪ
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ

ಉದ್ದೇಶಿತ ಜಾಗವನ್ನು ನಗರಸಭೆ ಖರೀದಿಸಿದೆ. ಯಾವುದೇ ಕಾಮಗಾರಿಗಾದರೂ ನೀಡಲು ಅವಕಾಶವಿದೆ. ಕಾನೂನು ಬದ್ಧವಾಗಿ ವಧಾಗೃಹ ನಿರ್ಮಿಸಲಾಗುತ್ತಿದೆ. ಆಕ್ಷೇಪಣೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು.
| ಶೇಖರಪ್ಪ ಈಳಿಗೇರ್
ನಗರಸಭೆ ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net