

ಸಾಗರ: ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿರುವ ಅಡಕೆ ಪರಿಷ್ಕರಣಾ ಮತ್ತು ಮಾರಾಟ ಸಹಕಾರ ಸಂಘದ (ಆಪ್ಸ್‌ಕೋಸ್) ಬೆಳವಣಿಗೆಗೆ ನಮ್ಮ ಹಿರಿಯರು ನಿರಂತರವಾಗಿ ಶ್ರಮಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ನಮ್ಮ ಅವಧಿಯಲ್ಲಿ ಸಂಸ್ಥೆಯನ್ನು ವ್ಯವಸ್ಥಿತವಾಗಿ ನಡೆಸಿದ್ದೇವೆ. ಕೆಲವರು ಚುನಾವಣಾ ಉದ್ದೇಶಕ್ಕಾಗಿ ಸಂಸ್ಥೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಆಪ್ಸ್‌ಕೋಸ್ ಅಧ್ಯಕ್ಷ, ಹಾಲಿ ನಿರ್ದೇಶಕ ಸ್ಥಾನದ ಅಭ್ಯರ್ಥಿ ಕೆ.ಎಂ.ಸೂರ್ಯನಾರಾಯಣ ಖಂಡಿಕಾ ಹೇಳಿದರು.
ಚುನಾವಣಾ ಉದ್ದೇಶಕ್ಕೆ ಕೆ.ಆರ್.ಶ್ರೀಧರ್ ಭಟ್ ಇತರರು ಅನಗತ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಟಿಎಪಿಎಂಸಿ ಅಧ್ಯಕ್ಷರಾಗಿದ್ದಾಗ ಸಂಸ್ಥೆಯನ್ನು ಪುನಶ್ಚೇತನಗೊಳಿಸುವಲ್ಲಿ ಯಾವ ಕ್ರಮಕೈಗೊಂಡಿದ್ದಾರೆ ಎಂದು ಮೊದಲು ಜನತೆಗೆ ಉತ್ತರಿಸಲಿ. ಟಿಎಪಿಎಂಸಿಎಸ್‌ನಲ್ಲಿ ಅಡಕೆ ಇಲ್ಲದೆ ಹಣ ಕೊಡುವ ಕಾನೂನುಬಾಹಿರ ಚಟುವಟಿಕೆಗಳು ನಡೆದಿತ್ತು. ಅದರ ಬಗ್ಗೆ ಮಾತನಾಡದ ಶ್ರೀಧರ ಭಟ್ಟರು ಈಗ ಆಪ್ಸ್‌ಕೋಸ್ ಮೇಲೆ ಆಪಾದನೆ ಮಾಡುತ್ತಾ ಚುನಾವಣೆಗೆ ನಿಂತಿರುವುದು ಹಾಸ್ಯಾಸ್ಪದ. ಹಲವು ವರ್ಷ ಟಿಎಪಿಎಂಸಿಎಸ್ ಅಧ್ಯಕ್ಷರಾಗಿ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಲು ವಿಫಲವಾಗಿರುವ ಅವರು ಆಪ್ಸ್‌ಕೋಸ್ ಸಂಸ್ಥೆಯನ್ನು ಹೇಗೆ ಉದ್ಧಾರ ಮಾಡುತ್ತಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಸುವರ್ಣ ಮಹೋತ್ಸವ ಆಚರಣೆ ಮಾಡಬೇಕು ಎನ್ನುವುದು ಸಂಸ್ಥೆಯ ಸರ್ವಸದಸ್ಯರ ಸಭೆಯಲ್ಲಿ ತೀರ್ಮಾನವಾಗಿತ್ತು. ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಷೇರುದಾರರ ಹೆಸರಿನಲ್ಲಿ ಇರಿಸಿದ್ದ ಹಣವನ್ನು ಅವರಿಗೆ 2,500 ರೂ. ಗಿಫ್ಟ್ ಓಚರ್ ಮೂಲಕ ನೀಡಿದ್ದೇವೆಯೆ ವಿಘೆ ಆಮಿಷವೊಡ್ಡಿಲ್ಲ. ಈಗಾಗಲೇ ನಮ್ಮ ತಂಡದ 16 ಜನರ ಪೈಕಿ 5 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದ್ದೇವೆ. ಸಂಸ್ಥೆಯನ್ನು ರಾಜ್ಯದಲ್ಲಿಯೇ ಮಾದರಿಯಾಗಿ ರೂಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಸೂಪರ್ ಮಾರ್ಕೆಟ್ ನಿರ್ಮಾಣದ ಜತೆಗೆ ಹತ್ತು ಹಲವು ಯೋಜನೆ ಹಮ್ಮಿಕೊಂಡಿದ್ದೇವೆ. ಷೇರುದಾರರು ತಮ್ಮ 11 ಜನರ ತಂಡಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಆಪ್ಸ್‌ಕೋಸ್ ಮಾಜಿ ಅಧ್ಯಕ್ಷ ಬಿ.ಎ.ಇಂದೂಧರ ಗೌಡ ಮಾತನಾಡಿ, ಷೇರುದಾರರು ನಮ್ಮ ತಂಡವನ್ನು ಬೆಂಬಲಿಸಿ ಸೆ.10ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡುವಂತೆ ಕೋರಿದರು.
ಕೆ.ಎಸ್.ಸುಬ್ಬಾರಾವ್, ರಾಘವೇಂದ್ರ ಹೊಡಬಟ್ಟೆ, ಕಟ್ಟಿನಕೆರೆ ಸೀತಾರಾಮಯ್ಯ, ಗುರುಪಾದ ಕೆರೆಮನೆ, ಕಲ್ಯಾಣಪ್ಪ ಗೌಡ, ಸುರೇಶ್, ವೆಂಕಟರಾವ್, ಕೃಷ್ಣಮೂರ್ತಿ ಇತರರಿದ್ದರು.