

ಹುಣಸೂರು: ಆಳವಾದ ಅಧ್ಯಯನದೊಂದಿಗೆ ಕನ್ನಡ ಸಾರಸ್ವತ ಲೋಕಕ್ಕೆ ವೈಶಿಷ್ಟ್ಯ ಪೂರ್ಣ ಕಾದಂಬರಿಗಳನ್ನು ನೀಡಿರುವ ಎಸ್.ಎಲ್.ಭೈರಪ್ಪ ಸಂವೇದನಾಶೀಲ ಬರಹಕ್ಕೆ ಪರ್ಯಾಯ ಹೆಸರಾಗಿದ್ದು, ಅವರೊಬ್ಬ ಜ್ಞಾನ ಪರ್ವತ ಎಂದು ನಿವೃತ್ತ ಪ್ರಾಂಶುಪಾಲ ಡಾ.ಎಚ್.ಆರ್.ಸಿದ್ದೇಗೌಡ ಬಣ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಹುಣಸೂರು ಘಟಕ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ಶನಿವಾರ ರೋಟರಿ ಭವನದಲ್ಲಿ ಆಯೋಜಿಸಿದ್ದ ಪದ್ಮಶ್ರೀ ಪುರಸ್ಕೃತ ಎಸ್.ಎಲ್.ಭೈರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
25ಕ್ಕೂ ಹೆಚ್ಚು ಕಾದಂಬರಿಗಳು, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ತಮ್ಮದೇ ರೀತಿಯ ಛಾಪನ್ನು ಭೈರಪ್ಪ ಒತ್ತಿದ ಅಭಿಜಾತ ಪ್ರತಿಭೆಯಾಗಿದ್ದರು. ಅವರಿಗೆ ಸರಿಸಾಟಿಯಾಗಿ ಸಮಕಾಲಿನ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಯಾರನ್ನೂ ಹೋಲಿಸಲು ಸಾಧ್ಯವಿಲ್ಲ. ಅಧ್ಯಯನ ಮತ್ತು ಅನುಭವದ ಮೂಲಕ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಲೇ ಜನಮಾನಸದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದರು. ಕಡುಬಡತನದಲ್ಲೇ ಬೆಳೆದ ಅವರ ಬದುಕನ್ನು ಪುನರ್ ವಿಮರ್ಶೆಗೆ ಒಳಪಡಿಸುವ ಅಗತ್ಯವಿದೆ. ಬಡವರ, ನೊಂದವರ ಬಾಳಿಗೆ ತಮ್ಮ ಕೈಲಾದ ಸಹಕಾರ ನೀಡುತ್ತಿದ್ದರು. ತಾನು ಹುಟ್ಟಿದ ಊರಿನ ಋಣ ತೀರಿಸುವ ಮೂಲಕ ಮಾದರಿಯಾದರು. ನೇರನುಡಿಯ ಭೈರಪ್ಪನವರ ವಿರುದ್ಧ ಕೆಲವರು ನಿರಂತರವಾಗಿ ನಿಂದಿಸುತ್ತಲೇ ಇದ್ದರೂ ಭೈರಪ್ಪ ಎದೆಗುಂದಲಿಲ್ಲ. ಪದ್ಮಶ್ರೀ, ಸರಸ್ವತಿ ಸಮ್ಮಾನ್ ಸೇರಿದಂತೆ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾದರೂ ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾಗಿದ್ದ ಅವರಿಗೆ ಅದು ಒಲಿಯದಿರುವಂತೆ ಮಾಡುವಲ್ಲಿ ಕೆಟ್ಟಶಕ್ತಿಗಳು ಜಯಸಾಧಿಸಿದವು ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಕೆ.ಮಹದೇವ ಮಾತನಾಡಿ, ಮೇರು ವ್ಯಕ್ತಿತ್ವದ ಸಾಹಿತ್ಯ ಸಂಸ್ಕೃತಿ, ಜನಸಾಮಾನ್ಯರೊಂದಿಗಿನ ಅವಿನಾಭಾವ ಸಂಬಂಧಗಳು ಬೈರಪ್ಪನವರ ವ್ಯಕ್ತಿತ್ವದ ಉತ್ತಮ ಉದಾಹರಣೆಗಳಾಗಿವೆ ಎಂದರು.
ರೋಟರಿ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್, ಹಿರಿಯ ದಲಿತ ಮುಖಂಡ ಹರಿಹರ ಅನಂದಸ್ವಾಮಿ, ಉಪನ್ಯಾಸಕ ಲಕ್ಷ್ಮೀಕಾಂತ್, ಎಸ್.ಜಯರಾಂ, ಕಸಾಪ ಗೌರವ ಕಾರ್ಯದರ್ಶಿ ಟಿ.ಲೋಕೇಶ್ ನುಡಿನಮನ ಸಲ್ಲಿಸಿದರು. ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಡೀಡ್ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ನಿಂಗರಾಜ ಮಲ್ಲಾಡಿ, ಬಸವಲಿಂಗಯ್ಯ, ನಟ ಕುಮಾರ್ ಅರಸೇಗೌಡ, ಧನಂಜಯ್, ಕೆ.ನಂಜುಂಡಸ್ವಾಮಿ, ಮಹದೇವಮ್ಮ, ಕಲ್ಪನಾ, ವಾಸುಕಿ, ವಿ.ವೆಂಕಟಯ್ಯ ಇತರರು ಇದ್ದರು.