ಭೈರಪ್ಪ ಹುಟ್ಟೂರಿನ ನೀರಿನ ಸಮಸ್ಯೆ ನೀಗಿಸಲು ಕ್ರಮ; ಸಿಎಂ ಅಧಿಕೃತ ನಿವಾಸದಲ್ಲಿ ಭೇಟಿ-ಮಾತುಕತೆ, ಬೊಮ್ಮಾಯಿ ಸಕಾರಾತ್ಮಕ ಸ್ಪಂದನೆ

Bhairappa
Published on

ಬೆಂಗಳೂರು: ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ಹುಟ್ಟೂರು, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರ ಗ್ರಾಮದ ಕುಡಿಯುವ ನೀರಿನ ಬವಣೆ ನೀಗಿಸುವ ಯೋಜನೆ ತ್ವರಿತ ಜಾರಿ ಆಸೆ ಚಿಗುರಿದೆ. ಮಹತ್ವದ ಯೋಜನೆ ನನೆಗುದಿಗೆ ಬಿದ್ದಿದ್ದರತ್ತ ಗಮನಸೆಳೆಯುವ ಉದ್ದೇಶದಿಂದ ಎಸ್.ಎಲ್.ಭೈರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶನಿವಾರ ಖುದ್ದು ಭೇಟಿಯಾದರು.

ಮುಖ್ಯಮಂತ್ರಿ ಅಧಿಕೃತ ನಿವಾಸ ‘ರೇಸ್​ವ್ಯೂ ಕಾಟೇಜ್’ನಲ್ಲಿ ಬೊಮ್ಮಾಯಿ ಅವರೊಂದಿಗೆ ಈ ಯೋಜನೆ ಕುರಿತು ರ್ಚಚಿಸಿ, ತ್ವರಿತ ಅನುಷ್ಠಾನದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು. ಸಂತೆಶಿವರದಲ್ಲಿ ಅಂತರ್ಜಲ ಬತ್ತುತ್ತಿದ್ದು, ಕುಡಿಯವ ನೀರಿನ ತಾಪತ್ರಯ ಹೆಚ್ಚಿದೆ. ಗ್ರಾಮದಿಂದ ಕೇವಲ 4-5 ಕಿ.ಮೀ. ದೂರದ ಹೇಮಾವತಿ ನದಿ ನೀರು ಪೂರೈಕೆ ಸಾಧ್ಯವಿದೆ ಎಂಬ ಮನವಿ ಮಂಡಿಸಿದರು ಎಂದು ಮೂಲಗಳು ಮಾಹಿತಿ ನೀಡಿವೆ. ಬಿ.ಎಸ್. ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಸಂತೆಶಿವರ ಗ್ರಾಮಕ್ಕೆ ಹೇಮಾವತಿ ನದಿಯಿಂದ ಕುಡಿಯುವ ನೀರು ಪೂರೈಕೆ ಯೋಜನೆ ಪ್ರಕಟಿಸಿ, 25 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ನಂತರ ಯಾವುದೇ ಪ್ರಗತಿಯಾಗಿಲ್ಲ. ಗ್ರಾಮಸ್ಥರ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ಘೋಷಿತ ಯೋಜನೆಗಳು ಸಕಾಲಕ್ಕೆ ಅನುಷ್ಠಾನ ವೆಚ್ಚ ತಗ್ಗಿ, ಜನರ ಸಮಸ್ಯೆ ಬಗೆಹರಿಯಲಿದೆ ಎಂದು ಎಸ್.ಎಲ್.ಭೈರಪ್ಪ ವಿವರಿಸಿದರು.

ಸಕಾರಾತ್ಮಕ ಸ್ಪಂದನೆ: ಯೋಜನೆಯ ಮಹತ್ವ ಹಾಗೂ ವಸ್ತುಸ್ಥಿತಿ ಅರಿತ ಬೊಮ್ಮಾಯಿ, ಭೈರಪ್ಪ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಸಂಬಂಧಿಸಿದ ಅಧಿಕಾರಿಗಳ ಜತೆಗೆ ರ್ಚಚಿಸಿ, ತ್ವರಿತ ಅನುಷ್ಠಾನಕ್ಕೆ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಹುಟ್ಟೂರಿನಲ್ಲಿ ಸ್ವಂತದ್ದೊಂದು ತುಂಡು ಜಮೀನು ಕೂಡ ಇಲ್ಲದ ಭೈರಪ್ಪ ಅವರು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಿಎಂಗೆ ಒತ್ತಾಯಿಸುವ ಮೂಲಕ ಹುಟ್ಟೂರಿನ ಬಗ್ಗೆ ಕಾಳಜಿ ಮೆರೆದಿದ್ದಾರೆ.

ವಿಜಯವಾಣಿ ಕ್ಲಬ್​ಹೌಸ್​ಸಂವಾದದಲ್ಲೂ ಪ್ರಸ್ತಾಪ

‘ವಿಜಯವಾಣಿ’ ಕ್ಲಬ್ ಹೌಸ್ ವೇದಿಕೆಯ ಚರ್ಚೆಯಲ್ಲಿ ಇತ್ತೀಚೆಗೆ ಭಾಗವಹಿಸಿದ್ದ ಭೈರಪ್ಪ, ಸ್ವಗ್ರಾಮದ ಕುಡಿವ ನೀರಿನ ಯೋಜನೆ ಅನುಷ್ಠಾನ ವಿಳಂಬದ ಬಗ್ಗೆ ಪ್ರಸ್ತಾಪಿಸಿ, ತೀವ್ರ ಬೇಸರ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು. ಸಿಎಂ ಅಧಿಕೃತ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಎಸ್.ಎಲ್.ಭೈರಪ್ಪ ಶನಿವಾರ ಭೇಟಿ ಮಾಡಿದರು. ಇದೇ ವೇಳೆ ತಮ್ಮ 2 ಕೃತಿಗಳನ್ನು ಸಿಎಂಗೆ ನೆನಪಿನ ಕಾಣಿಕೆಯಾಗಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net