

ಕಡೂರು: ಪಕ್ಷ ವಿರೋಧಿ ಚಟುವಟಿಕೆ ನಡೆಸುವ ನೈಋತ್ಯ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಅವರಿಗೆ ಮತ್ತೆ ಶಿಕ್ಷಕರ ಮತಕೇಳುವ ನೈತಿಕತೆ ಇಲ್ಲ. ಶಿಕ್ಷಕರ ಕ್ಷೇತ್ರದ ಮತದಾರರು ಮತ ನೀಡದೆ ಸೋಲಿಸಬೇಕು ಎಂದು ಜೆಡಿಎಸ್ ಮುಖಂಡ ಎರೇಹಳ್ಳಿ ರಘು ಹೇಳಿದರು.
2023ರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಲ್ಲಿದ್ದರೂ ನೇರವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕುವಂತೆ ಎಸ್.ಎಲ್.ಭೋಜೇಗೌಡ ಕರೆ ನೀಡಿದ್ದರು. ಇದರಿಂದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಸಾಕಷ್ಟು ಅನ್ಯಾಯವಾಗಿದೆ. ಈಗ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಎಸ್.ಎಲ್.ಭೋಜೇಗೌಡ ಅವರಿಗೆ ಜೆಡಿಎಸ್ ಅವಕಾಶ ನೀಡಿರುವುದು ಪಕ್ಷ ವಿರೋಧಿ ಚಟವಟಿಕೆ ನಡೆಸಿದವರಿಗೆ ಹೆಚ್ಚಿನ ಮನ್ನಣೆ ನೀಡಿದಂತಾಗಿದೆ. ವಿಧಾನಸಭೆಯಲ್ಲಿ ಮೊದಲು ಜೆಡಿಎಸ್ 39 ಶಾಸಕರಿದ್ದರು. ಈಗ 19ಕ್ಕೆ ಇಳಿದಿದೆ. ಇಂಥ ನಾಯಕರಿಂದಲೇ ಎಂಬುದನ್ನು ಮನಗಾಣಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜನರಿಂದ ಆಯ್ಕೆಯಾಗದೆ ಹಿಂಬಾಗಿಲು ಮೂಲಕವೇ ರಾಜಕಾರಣ ಮಾಡುತ್ತ ಪಕ್ಷದ ಕಾರ್ಯಕರ್ತರನ್ನು ಬಲಿಪಶುಗಳನ್ನಾಗಿ ಮಾಡಿ ಪಕ್ಷದ ಸಂಘಟನೆಯಲ್ಲಿ ಶೂನ್ಯವಾಗಿಸಿದ್ದಾರೆ ಎಂದು ದೂರಿದರು. ಆಲಘಟ್ಟ ಮಧು, ಚಿಕ್ಕಿಂಗಳ ಸಿ.ಡಿ. ಗೋವಿಂದರಾಜು ಇದ್ದರು.