

ಬೆಂಗಳೂರು: ಬಸವನಗುಡಿಯ ಎನ್.ಆರ್. ಕಾಲನಿ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ನಿರ್ಮಾಣ ಕಾಮಗಾರಿಗಾಗಿ ಯಾವುದೇ ಮರಗಳನ್ನು ತೆರವು ಮಾಡಲಾಗಿಲ್ಲ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
ಬೆಂಗಳೂರಿನ ವಕೀಲ ಪ್ರಶಾಂತ್ ರಾವ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಸೋಮವಾರ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ, ಎನ್.ಆರ್. ಕಾಲನಿಯಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಸಾರ್ವಜನಿಕರು ಮನವಿ ಸಲ್ಲಿಸಿದ್ದರು. ಸ್ಥಳಕ್ಕೆ ತೆರಳಿ ಪರಿಸ್ಥಿತಿ ಪರಿಶೀಲಿಸಿದ ನಂತರ ಎನ್.ಆರ್. ಕಾಲನಿ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ಅಗತ್ಯವಿರುವುದನ್ನು ಮನಗಂಡು ಕಾಮಗಾರಿ ಆರಂಭಿಸಲಾಗಿದೆ. ಆದರೆ, ಅದಕ್ಕಾಗಿ ಯಾವುದೇ ಮರಗಳನ್ನು ಕತ್ತರಿಸಿರುವುದಾಗಲೀ, ಸ್ಥಳಾಂತರಿಸುವುದಾಗಲೀ ಮಾಡಿಲ್ಲ. ಕಾಮಗಾರಿ ನಡೆಸಲು ಕೆಲ ಕೊಂಬೆಗಳನ್ನು ಮಾತ್ರ ಕತ್ತರಿಸಲಾಗಿದೆ ಎಂದು ಫೋಟೋಗಳ ಸಹಿತ ನ್ಯಾಯಪೀಠಕ್ಕೆ ವಿವರಿಸಿದರು.
ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ಪಾಲಿಕೆ ಅಧಿಕಾರಿಯೊಬ್ಬರು ಸ್ಥಳ ಪರಿಶೀಲನೆ ನಡೆಸಿದ್ದು, ಅಲ್ಲಿ ಯಾವುದೇ ರೀತಿಯ ಒತ್ತುವರಿಯಾಗಿಲ್ಲ. ಫುಟ್‌ಪಾತ್ ಮೇಲೆ ಸ್ಕೈವಾಕ್‌ನ ಕಂಬಗಳನ್ನು ನಿರ್ಮಿಸಲಾಗಿದ್ದು, ಅದರಿಂದ ಪಾದಚಾರಿಗಳ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಸಾರ್ವಜನಿಕರು ಸುಲಭ ಹಾಗೂ ಸುರಕ್ಷಿತವಾಗಿ ರಸ್ತೆ ದಾಟಲು ನೆರವಾಗಲೆಂದು ಸ್ಕೈವಾಕ್ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಶೇ. 80 ಕಾಮಗಾರಿಯೂ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಅದನ್ನು ದಾಖಲಿಸಿಕೊಂಡ ಪೀಠ, ಬಿಬಿಎಂಪಿ ಆಕ್ಷೇಪಣೆಗೆ ಪ್ರತಿ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಡಿ.7ಕ್ಕೆ ಮುಂದೂಡಿತು.