

ಬೆಂಗಳೂರು: ಯಾವುದೇ ಹಬ್ಬ ಹರಿದಿನಗಳು ಬಂದಾಗ ಮನೆಯನ್ನು ಸ್ವಚ್ಛಗೊಳಿಸುವುದು, ಬಣ್ಣ ಬಳಿಯುವುದು ಇತ್ಯಾದಿ ಮನೆಯ ಅಲಂಕಾರ ವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಅದರಲ್ಲೂ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗುವುದು ದೀಪಗಳ ಸಾಲು. ಆ ದೀಪಗಳಲ್ಲಿ ವಿಶೇಷ ಆಕರ್ಷಣೆ ಆಕಾಶ ದೀಪ. ಮನೆ ಹೊಸದಿರಲಿ, ಹಳೇಯದಿರಲಿ ಮನೆಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿರುವುದು ಬೆಳಕು. ಪ್ರಾಚೀನ ಕಾಲದಲ್ಲಿ ಬೆಳೆಕಿನ ಮೂಲ ಎಣ್ಣೆಯ ದೀಪ ಅಥವಾ ದಂದಿ, ದೀವಟಿಗೆಗಳಾಗಿದ್ದರೆ; ಇಂದು ವಿದ್ಯುತ್ ದೀಪಗಳೇ ಬೆಳಕಿನ ಅವಶ್ಯಕತೆಯನ್ನು ಪೂರೈಸುತ್ತಿವೆ. ಇಂಧನದ ಮೂಲ ಬದಲಾದರೂ ಬೆಳಕಿನ ಪರಿಕಲ್ಪನೆಯನ್ನು ಮಾತ್ರ ಮನುಷ್ಯ ಮರೆತಿಲ್ಲ. ಹಾಗೆ ಮನೆಯನ್ನು ದೀಪಗಳಿಂದ ಅಲಂಕರಿಸುವ ಪರ್ವ ಕಾಲವೇ ದೀಪಾವಳಿ. ಸಾಮಾನ್ಯವಾಗಿ ಸಾಲು ಸಾಲು ಹಣತೆಗಳನ್ನಿಟ್ಟು ದೀಪಾವಳಿ ಹಬ್ಬವನ್ನು ಆಚರಿಸುವುದು ಹಬ್ಬದ ಒಂದೆರಡು ದಿನಗಳಾದರೆ; ದೀಪಾವಳಿಯಿಂದ ಆರಂಭಿಸಿ ಕಾರ್ತೀಕ ಮಾಸದ ಒಂದು ತಿಂಗಳು ಪರ್ಯಂತ ಮನೆಯ ಮೇಲೆ ಬೆಳಗಿಸುವುದು ಆಕಾಶ ದೀಪ. ಸಾಮಾನ್ಯವಾಗಿ ದೀಪವನ್ನು ಆಕಾಶದಲ್ಲಿ ನೇತು ಹಾಕುವುದರಿಂದ ಇದನ್ನು ಆಕಾಶ ದೀಪ ಎಂಬ ಹೆಸರಿನಿಂದ ಕರೆಯಲಾಗಿದೆ. ಈ ಆಕಾಶ ದೀಪಗಳು ಮನೆಯ ಅಲಂಕಾರವನ್ನು ಹೆಚ್ಚಿಸುವುದರ ಜೊತೆಗೆ ಪರಂಪರೆಯನ್ನು ಕೂಡಾ ಪ್ರತಿಬಿಂಬಿಸುತ್ತಿವೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಯ ಸೌಂದರ್ಯ ವೃದ್ಧಿಗೆ ಅಳವಡಿಸುವ ಆಕಾಶ ದೀಪವು ಸಂಸ್ಕೃತಿಯ ಪ್ರತಿಬಿಂಬವೂ ಹೌದು. ನಮ್ಮ ಪರಂಪರೆಯಂತೆ ಹಿಂದೂ ಧಾರ್ಮಿಕ ನಂಬಿಕೆಯನ್ನು ಒಳಗೊಂಡಿದೆ. ಆಕಾಶ ದೀಪವನ್ನು ಅಳವಡಿಸುವುದರಿಂದ ಆ ಮನೆಗೆ ಮಹಾಲಕ್ಷ್ಮಿಯ ಕೃಪೆ ದೊರೆಯುತ್ತದೆ ಎಂಬ ನಂಬಿಕೆ ಇದೆ. ಮಾಧವನ ಆರಾಧನೆಗಳಲ್ಲಿ ಇದೂ ಒಂದು ಮಾರ್ಗ ಎಂದು ಹೇಳಲಾಗಿದೆ. ದಾಮೋಧರಾಯ ನಭಸಿ ತುಲಾಯಾಂ ಲೋಲಾಯ ಸಹ ಪ್ರದೀಪಂ ತೇ ಪ್ರಯಾಚ್ಛಾಮಿ ನಮೋನಂತಾಯ ವೇಧಸೆ ॥ ಹರಿಭಕ್ತಿ ವಿಲಾಸದ ಈ ಶ್ಲೋಕದ ಪ್ರಕಾರ ಅನಂತಶಕ್ತಿಯುತನಾದ ಮಾಧವನಿಗೆ ಆಕಾಶದಲ್ಲಿ ದೀಪವನ್ನು ಬೆಳಗಿಸಿ ನಮಿಸುತ್ತೇನೆ ಎಂಬ ಪ್ರಾರ್ಥನೆ ಇದೆ. ಕಾರ್ತಿಕ ಮಾಸದಲ್ಲಿ ಕ್ಷಣಮಾತ್ರ ಬೆಳಗುವ ದೀಪವೂ ಕೂಡಾ ಸರ್ವ ಪಾಪಗಳನ್ನು ವಿನಾಶ ಮಾಡಲಿದ್ದು, ರಾತ್ರಿ ಪೂರ್ತಿ ಬೆಳಗವು ಆಕಾಶ ದೀಪವು ಮನೆಯ ಸೌಂಧರ್ಯ, ಸಂಪತ್ತು ವೃದ್ಧಿಗೆ ಕಾರಣವಾಗಲಿದೆ. ಕ್ರೈಸ್ತ ಬಾಂಧವರು ಕ್ರಿಸ್‌ಮಸ್ ಸಂದರ್ಭದಲ್ಲಿ ತಮ್ಮ ಮನೆಗಳ ಮುಂದೆ ಕೂಡ ಆಕಾಶದೀಪವನ್ನು ಬೆಳಗುತ್ತಾರೆ.
ದೇವಾಲಯಗಳ ಮುಂದೆ ಸ್ಥಾಪಿಸುವ ದೀಪಸ್ತಂಭ ಅಥವಾ ಗರುಡಗಂಭದ ಮೇಲೆ ವಿಶೇಷ ದಿನಗಳಲ್ಲಿ ಆಕಾಶದೀಪ ಬೆಳಗಿಸಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಮನೆಗಳ ಮುಂಭಾಗ ಎಣ್ಣೆಯ ಜೋಲಿ ದೀಪಗಳನ್ನು ಆಕಾಶ ದೀಪದಂತೆ ಬೆಳಗಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಆಕಾಶದೀಪಗಳು ವಿದ್ಯುತ್ ಅಲಂಕೃತವಾಗಿರುವುದರಿಂದ ಮಾರುಕಟ್ಟೆಗಳಲ್ಲಿ ತರಹೇವಾರಿ ಆಕಾಶದೀಪಗಳು ದೊರೆಯುತ್ತಿವೆ. ಬಣ್ಣದ ಕಾಗದ, ಪ್ಲಾಸ್ಟಿಕ್, ಲೋಹ, ಗಾಜು, ಮಣ್ಣಿನಿಂದ ವಿನ್ಯಾಸಗೊಳಿಸಿದ ಬಗೆ ಬಗೆಯ ಆಕಾಶ ದೀಪಗಳು ದೊರೆಯುತ್ತವೆ. ತಮ್ಮ ಮನೆಯ ಗೋಡೆಯ ಬಣ್ಣ, ವಿನ್ಯಾಸ, ಎತ್ತರಕ್ಕೆ ಅನುಗುಣವಾಗಿ ಆಕಾಶದೀಪಗಳನ್ನು ಖರೀದಿಸಬಹುದು.