

ಮೈಸೂರು: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಹಾಗೂ ಚಂದ್ರಯಾನ-3 ಯಶಸ್ವಿ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಮೊಬೈಲ್ ಇನ್ನೋವೇಶನ್ ಲ್ಯಾಬ್ ವತಿಯಿಂದ ಹಿಟ್ಟವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಯಿತು.
ವಿದ್ಯಾರ್ಥಿಗಳಿಗೆ ರಾಕೆಟ್, ವಿಕ್ರಾಂತ್ ಲ್ಯಾಂಡರ್, ಪ್ರಜ್ಞಾನ್ ರೋವರ್, ಗಗನಯಾನಿಗಳ ವಸ್ತ್ರವಿನ್ಯಾಸವನ್ನು ಒಳಗೊಂಡ ಮಾದರಿ ಸೇರಿದಂತೆ ಈ ಮೂರು ವರ್ಕಿಂಗ್ ಪ್ರೋಟೋಟೈಪ್ ಮಾದರಿಗಳ ಸಮೇತವಾಗಿ ಪರಿಚಯಿಸಲಾಯಿತು.
ಜತೆಗೆ, ಅವುಗಳ ಕಾರ್ಯನಿರ್ವಹಣೆ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ವಿಜ್ಞಾನಿಗಳ ಪರಿಶ್ರಮ ಮತ್ತು ಕಾರ್ಯ ಸಾಧನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.
ಮುಖ್ಯ ಶಿಕ್ಷಕ ಪುಟ್ಟಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತವೆ ಎಂದರು.
ಎಲ್ಲ ವಿದ್ಯಾರ್ಥಿಗಳು ಮೂಲ ಮಾದರಿಗಳ ಕಾರ್ಯಕ್ಷಮತೆ ವೀಕ್ಷಿಸಿ ಕುತೂಹಲದಿಂದ ಸಂತಸ ವ್ಯಕ್ತಪಡಿಸಿದರು. ಶಿಕ್ಷಕರಾದ ಟಿ.ಎಸ್.ಪವಿತ್ರಾ, ಟಿ.ಎಸ್.ಉಮಾ, ಜಯಪ್ರಕಾಶ್, ಹಂಸವೇಣಿ, ಸುಮಾ ಉಪಸ್ಥಿತರಿದ್ದರು.
ಬನ್ನೂರಿನ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಆಕಾಶ ವೀಕ್ಷಣೆ ಮಾಡಿದರು. ಸರಸ್ವತಿ, ವಾರ್ಡನ್ ಅಕ್ಷತಾ, ಅಗಸ್ತ್ಯ ಫೌಂಡೇಷನ್ ಸಿಬ್ಬಂದಿ ಪ್ರದೀಪ್, ಕುಸುಮಾ, ಸುನೀಲ್ ಉಪಸ್ಥಿತರಿದ್ದರು.