

ಸಿದ್ದಾಪುರ: ರಕ್ತ ಅಭಾವದ ಸಮಸ್ಯೆ ಎದುರಿಸುತ್ತಿದ್ದ ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕದ ಮೇಲ್ವಿಚಾರಕರ ಕರೆಗೆ ಇಲ್ಲಿನ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆ 61ಜನರಿಂದ ಬುಧವಾರ ರಕ್ತದಾನ ಮಾಡಿಸುವ ಮೂಲಕ ನೆರವಾಗಿದೆ.
ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯ ಸಿದ್ದಾಪುರ ಶಾಖೆಯ ಪ್ರಮುಖರಿಗೆ ಮಡಿಕೇರಿಯ ಕೊಡಗು ಬ್ಲಡ್ ಡೋನರ್ಸ್ ಕಾರ್ಯದರ್ಶಿ ಮೈಕೆಲ್ ವೇಗಸ್ ಕರೆ ಮಾಡಿ ತೀವ್ರ ರಕ್ತದ ಅಭಾವ ಸೃಷ್ಟಿಯಾಗಿರುವ ಕುರಿತು ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸಂಘಟನೆ ಸದಸ್ಯರು, 61 ಜನರಿಂದ ರಕ್ತದಾನ ಮಾಡಿಸುವ ಮೂಲಕ ಸಮಸ್ಯೆಗೆ ಸ್ಪಂದಿಸಿದಾರೆ.
ಇಲ್ಲಿನ ಮುನ್ವರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಮಸೀದಿಯ ಖತೀಬ್ ನೌಫಲ್ ಹುದವಿ ಸೇರಿದಂತೆ ಮದರಸ ಅಧ್ಯಾಪಕರು, ಸಂಘಟನೆ ಸದಸ್ಯರು ಮತ್ತು ಸ್ಥಳೀಯರು ರಕ್ತ ದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.
ಮಾದರಿಯಾದ ಅಂಗವಿಕಲ ವಿದ್ಯಾರ್ಥಿ: ಪಾಲಿಬೆಟ್ಟದ ಚೇಶೈರ್ ಹೋಂ ವಿಶೇಷ ಶಾಲೆ ವಿದ್ಯಾರ್ಥಿ ಸಿದ್ದಾಪುರದ ಅಸೀಶ್ ಸ್ವಯಂಪೇರಣೆಯಿಂದ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು. ವಿದ್ಯಾರ್ಥಿಯ ಕಾಳಜಿಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಯಿತು.
ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೈಕಲ್ ವೇಗಸ್ ಮಾತನಾಡಿ, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಅಭಾವ ಕಂಡು ಬಂದಿರುವ ಕುರಿತು ವಿವಿಧ ಸಂಘ, ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿತ್ತು. ಸಿದ್ದಾಪುರದ ಎಸ್‌ಕೆಎಸ್‌ಎಸ್‌ಎಫ್ ಸಂಘಟನೆ ಸುಮಾರು 61 ಯೂನಿಟ್ ರಕ್ತವನ್ನು ಸಂಗ್ರಹಿಸುವ ಮೂಲಕ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‌ಕೆಎಸ್‌ಎಸ್‌ಎಫ್ ಸಂಘಟನೆ ಕಾರ್ಯದರ್ಶಿ ಆಸ್ಕರ್ ಮಾತನಾಡಿ, ತುರ್ತಾಗಿ ರಕ್ತದ ಅವಶ್ಯಕತೆ ಇರುವ ಕುರಿತು ಬ್ಲಡ್ ಡೋನರ್ಸ್ ಸಂಸ್ಥೆ ಮಾಹಿತಿ ನೀಡಿತ್ತು. ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಮದರಸ ಅಧ್ಯಾಪಕರು ಸೇರಿದಂತೆ ಸ್ಥಳೀಯರು, ಸಂಘದ ಪ್ರಮುಖರು ಸೇರಿ 61 ಜನರಿಂದ ರಕ್ತದಾನ ಮಾಡಿಸಿ ಸಹಕರಿಸಿದ್ದಾರೆ ಎಂದರು.
ಮುಸ್ಲಿಂ ಜಮಾಅತ್ ಕಮಿಟಿಯ ರೌವೂಫ್ ಹಾಜಿ, ಖತೀಬ್ ನೌಫಲ್ ಹುದವಿ, ಅರಿಫ್ ಫೈಜಿ, ಅಬೂಬಕ್ಕರ್ ವಾಫಿ, ಜಬ್ಬಾರ್ ಫೈಜಿ, ಸಹದ್ ಫೈಜಿ, ಮೊಯ್ದೀನ್, ಹನೀಫ್, ಆಸ್ಕರ್, ನವಾಸ್, ಅಯಾಸ್, ಬಷೀರ್, ಸರ್ಪೂದೀನ್ ಸೇರಿದಂತೆ ರಕ್ತ ನಿಧಿ ಘಟಕದ ಸಿಬ್ಬಂದಿ ಹಾಜರಿದ್ದರು