

ಆನೇಕಲ್: ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ನುಡಿದರು.
ಪಟ್ಟಣದ ಶ್ರೀರಾಮ ಕುಟೀರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಸ್ಕೌಟ್ಸ್ ಗೈಡ್ಸ್ ಮೇಳದಲ್ಲಿ ಮಾತನಾಡಿದರು.
ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದರೆ ಯುವಜನಾಂಗಕ್ಕೆ ಮಾನವೀಯ ಮೌಲ್ಯ ಬಿತ್ತಿ ಅವರನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಬೇಕು. ಪ್ರಾಮಾಣಿಕತೆ, ವಿಧೇಯತೆ ಮತ್ತು ನಮ್ರತಾ ಮನೋಭಾವ ಬಾಲ್ಯದಿಂದಲೇ ಕಲಿಯುವಂತೆ ಮಾಡಬೇಕು ಎಂದರು.
ಮಕ್ಕಳಲ್ಲಿ ದೇಶಭಕ್ತಿ, ಶಿಸ್ತು ಮತ್ತು ಪರಿಸರದ ಬಗ್ಗೆ ಪ್ರೀತಿ ಮೂಡಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಅನೇಕ ಶಿಬಿರ ನಡೆಸಿ ಅವರವರ ವಯೋಮಿತಿಗೆ ತಕ್ಕಂತೆ ಸಂಸ್ಥೆಯು ಮಕ್ಕಳಿಗೆ ತರಬೇತಿ ನೀಡುತ್ತಿದೆ ಎಂದು ಹೇಳಿದರು.
ಶಾಸಕ ಬಿ. ಶಿವಣ್ಣ ಮಾತನಾಡಿ, ಬಾಲ್ಯದಲ್ಲಿ ಕಲಿಯುವ ಶಿಸ್ತು ಜೀವನದುದ್ದಕ್ಕೂ ನೆರವಾಗಲಿದೆ. ಯಾರೊಬ್ಬರೂ ಸಮಯ ವ್ಯರ್ಥಮಾಡಬಾರದು. ಸಮಾಜಕ್ಕೆ ಕೈಲಾದಷ್ಟು ಸೇವೆ ಮಾಡಬೇಕು ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಷ್ಟ್ರೀಯ ಕೇಂದ್ರ ಸ್ಥಾನಿಕ ಆಯುಕ್ತ ಚಿನ್ನಸ್ವಾಮಿರೆಡ್ಡಿ ಮಾತನಾಡಿ, ಮಕ್ಕಳು ನಿಸ್ವಾರ್ಥ ಸೇವೆ ಮಾಡುವುದನ್ನು ಕಲಿಯಬೇಕು ಹಾಗೂ ತಂದೆ, ತಾಯಿ ಮತ್ತು ಗುರುವಿಗೆ ಜೀವನದುದ್ದಕ್ಕೂ ಗೌರವ ಕೊಡಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಎ.ಎನ್. ನರೇಂದ್ರ ಕುಮಾರ್ ಮಾತನಾಡಿ, ಮೇಳದಲ್ಲಿ 1500ಕ್ಕೂ ಹೆಚ್ಚು ಕಬ್ಸ್, ಬುಲ್‌ಬುಲ್ಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ ಮಕ್ಕಳು ಭಾಗವಹಿಸಿದ್ದು, ಅನೇಕ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ. ರಾಮಚಂದ್ರ, ಜಿಪಂ ಮಾಜಿ ಸದಸ್ಯ ಕೆ. ಗೋಪಾಲಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್. ರಾಮಮೂರ್ತಿ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಶಂಕರಮೂರ್ತಿ, ತಾಲೂಕು ಪಂಚಾಯಿತಿ ಸದಸ್ಯ ಎಂ. ಆನಂದ್ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಿ.ಎನ್. ವೀರಭದ್ರಪ್ಪ, ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಗೋಪಾಲ್, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತರಾದ ಬಿ.ಎಲ್. ಶೇಖರ್, ಕೆ. ವೀಣಾ, ಜಿಲ್ಲಾ ಖಜಾಂಚಿ ಸಿ. ಲಕ್ಷ್ಮೀಕಾಂತರಾಜು, ಜಿಲ್ಲಾ ಸಹಕಾರ್ಯದರ್ಶಿ ಜಿ. ನಾಗರಾಜು, ಜಂಟಿ ಕಾರ್ಯದರ್ಶಿ ಆರ್. ಸುಮಾ, ಜಿಲ್ಲಾ ತರಬೇತಿ ಆಯುಕ್ತ ಎ.ಎಂ. ಮಂಜುನಾಥ್ ಇತರರು ಇದ್ದರು.