ಎಟಿಎಂನಲ್ಲಿ ಸ್ಕಿಮ್ಮಿಂಗ್ ಅಳವಡಿಕೆ ಇಬ್ಬರ ಸೆರೆ

ATm
Published on

ಮಂಗಳೂರು: ನಗರದ ಹಲವು ಕಡೆಗಳಲ್ಲಿ ಎಟಿಎಂ ಯಂತ್ರಗಳನ್ನು ಸ್ಕಿಮ್ಮಿಂಗ್ ಮಾಡಿ, ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದ ಕೃತ್ಯಕ್ಕೆ ಸಂಬಂಧಿಸಿ ನವದೆಹಲಿ ಮೂಲದ ವ್ಯಕ್ತಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಓರ್ವ ನವದೆಹಲಿ ಹಾಗೂ ಇನ್ನೋರ್ವ ಕಾಸರಗೋಡು ನಿವಾಸಿ ಎಂದು ತಿಳಿದು ಬಂದಿದೆ. ಸ್ಕಿಮ್ಮಿಂಗ್ ಕೃತ್ಯದಲ್ಲಿ ಒಟ್ಟು 6 ಮಂದಿಯ ತಂಡ ಶಾಮೀಲಾಗಿದ್ದು, ಕೃತ್ಯದ ಕಿಂಗ್‌ಪಿನ್ ಸೇರಿದಂತೆ ಉಳಿದ ಆರೋಪಿಗಳಿಗೆ ಶೋಧ ಮುಂದುವರಿದಿದೆ.

ನಗರದ ಬೈಕಂಪಾಡಿ, ಮಲ್ಲಿಕಟ್ಟೆ, ಗಾಂಧಿನಗರ, ಕಾಟಿಪಳ್ಳ ಸೇರಿದಂತೆ ವಿವಿಧ ಕಡೆ ಸ್ಕಿಮ್ಮಿಂಗ್ ಕೃತ್ಯ ನಡೆಸಿದ ಆರೋಪಿಗಳ ಒಂದೇ ತಿಂಗಳಲ್ಲಿ ಲಕ್ಷಾಂತರ ರೂ. ಲಪಟಾಯಿಸಿದ್ದರು. ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಜಾಡು ಪತ್ತೆ ಹಚ್ಚುವುದು ಬ್ಯಾಂಕ್ ಸಿಬ್ಬಂದಿ ಮತ್ತು ಪೊಲೀಸರಿಗೆ ಸವಾಲಾಗಿತ್ತು.

ಪತ್ತೆಯಾದದ್ದು ಹೇಗೆ?: ಕಾರಿನಲ್ಲಿ ಬಂದ ಯುವಕರ ತಂಡ ಮಂಗಳಾದೇವಿ ಎಟಿಎಂನಲ್ಲಿ ಸ್ಕಿಮ್ಮಿಂಗ್ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದರು. ಇದನ್ನು ಪೆಟ್ರೋಲ್ ಬಂಕ್ ಸಿಬ್ಬಂದಿ ಗಮನಿಸಿ, ಎಟಿಎಂನತ್ತ ತೆರಳಿದ್ದಾರೆ. ಇದನ್ನು ನೋಡಿದ ಯುವಕರಿಬ್ಬರು ಅಲ್ಲಿಂದ ಓಡಿ ತಪ್ಪಿಸಲು ಯತ್ನಿಸಿದ್ದಾರೆ. ಕೂಡಲೇ ಪೆಟ್ರೋಲ್ ಸಿಬ್ಬಂದಿ ಮತ್ತು ಸಾರ್ವಜನಿಕರು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆರೋಪಿಗಳನ್ನು ಪಾಂಡೇಶ್ವರ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪ್ರಕರಣ ಸೈಬರ್ ಠಾಣೆಗೆ ಹಸ್ತಾಂತರಿಸಲಾಗಿದೆ.

ದಿಲ್ಲಿ ಮೂಲದ ತಂಡ: ದಿಲ್ಲಿ ಮೂಲದ ಒಂದೇ ತಂಡ ಸುಮಾರು ಮೂರು ತಿಂಗಳಿನಿಂದೀಚೆಗೆ ನಗರದ ವಿವಿಧ ಕಡೆ ಎಟಿಎಂಗಳಿಗೆ ಹೋಗಿ ಸ್ಕಿಮ್ಮಿಂಗ್ ನಡೆಸಿ ಬ್ಯಾಂಕ್ ಖಾತೆಯಿಂದ 5 ಲಕ್ಷಕ್ಕೂ ಅಧಿಕ ರೂ. ವಂಚನೆ ಮಾಡಿದೆ. ಈ ಪ್ರಕರಣದ ಸೂತ್ರಧಾರ ನವದೆಹಲಿ ಮೂಲದವನಾಗಿದ್ದು, ಆತ ಸೇರಿದಂತೆ ಉಳಿದವರಿಗೆ ಪೊಲೀಸರು ಶೋಧ ನಡೆತ್ತಿದ್ದಾರೆ.

ಸಾರ್ವಜನಿಕರಿಂದ ಶ್ಲಾಘನೆ: ಸ್ಕಿಮ್ಮಿಂಗ್ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ, ಬೆನ್ನಟ್ಟಿ ಹಿಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತು ಸಾರ್ವಜನಿಕರ ಬಗ್ಗೆ ಬ್ಯಾಂಕ್ ಸಿಬ್ಬಂದಿ, ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ನಗರದಲ್ಲಿ ವ್ಯಾಪಿಸಿದ ಸ್ಕಿಮ್ಮಿಂಗ್ ಜಾಲವೊಂದನ್ನು ಬೇಧಿಸಿದಂತಾಗಿದೆ.

ಏನಿದು ಸ್ಕಿಮ್ಮಿಂಗ್?: ವಂಚಕರು ಎಟಿಎಂ ಯಂತ್ರಗಳಲ್ಲಿ ಸೂಕ್ಷ್ಮ ಉಪಕರಣ ಅಳವಡಿಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಕಳವು ಮಾಡುತ್ತಾರೆ. ಇದಕ್ಕಾಗಿ ವಂಚಕರು ಅಳವಡಿಸುವ ಉಪಕರಣ ಬಳಕೆದಾರರು ಎಟಿಎಂ ಕಾರ್ಡ್ ಸ್ವೈಪ್ ಮಾಡಿದಾಗ ಅದರಲ್ಲಿರುವ 16 ಅಂಕಿಗಳ ಸಂಖ್ಯೆ ಮತ್ತು ಸಿವಿಸಿ ಸಂಖ್ಯೆಗಳನ್ನು ದಾಖಲಿಸಿಕೊಳ್ಳುತ್ತದೆ. ನಂತರ ನಕಲಿ ಕಾರ್ಡ್ ತಯಾರಿಸಿ ಹಣ ವಿದ್‌ಡ್ರಾ ಮಾಡುವುದಕ್ಕೆ ಸ್ಕಿಮ್ಮಿಂಗ್ ಎಂದು ಕರೆಯಲಾಗುತ್ತದೆ.

ಗ್ರಾಹಕರು ಏನು ಮಾಡಬೇಕು?: ಎಟಿಎಂನಲ್ಲಿ ಶಂಕಾಸ್ಪದವಾಗಿ ಯಾವುದಾದರೂ ಉಪಕರಣ ಜೋಡಣೆಯಾಗಿದೆಯೇ ಎನ್ನುವುದನ್ನು ಗ್ರಾಹಕರು ಮೊದಲು ಪರಿಶೀಲನೆ ಮಾಡಬೇಕು. ಈ ಸಂದರ್ಭದಲ್ಲಿ ಏನಾದರೂ ಅನುಮಾನ ಬಂದಲ್ಲಿ, ಆ ಜಾಗದಲ್ಲಿ ಕಾರ್ಡ್ ಬಳಕೆ ಮಾಡಬಾರದು. ಕೂಡಲೇ ಸಮೀಪದ ಬ್ಯಾಂಕ್ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net