ಕೌಶಲ, ದೃಷ್ಟಿಕೋನಗಳು ಗಡಿಗಳಿಗೆ ಸೀಮಿತವಾಗದಿರಲಿ: ನ್ಯಾ. ಪಿ.ಬಿ. ಭಜಂತ್ರಿ

BCU convocation Gold medalist
Published on

ಬೆಂಗಳೂರು: ಪರಸ್ಪರ ಸಂಪರ್ಕ ಹೆಚ್ಚುತ್ತಿರುವ ಜಗತ್ತಿನಲ್ಲಿ ರಾಷ್ಟ್ರ-ರಾಷ್ಟ್ರಗಳ ನಡುವಿನ ಗಡಿಗಳು ಮಸುಕಾಗುತ್ತಿವೆ. ಇಂತಹ ಸಂದರ್ಭದಲ್ಲಿ ಯುವ ಜನರ ಕೌಶಲಗಳು ಮತ್ತು ದೃಷ್ಟಿಕೋನಗಳು ಭೌಗೋಳಿಕ ಗಡಿಗಳಿಗಷ್ಟೇ ಸೀಮಿತವಾಗಿರಬಾರದು ಎಂದು ಬಿಹಾರ ಪಾಟ್ನಾದ ಹೈಕೋರ್ಟ್ ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಪದವೀಧರರಿಗೆ ಸಲಹೆ ನೀಡಿದರು.

ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಬುಧವಾರ ನಡೆದ ಬೆಂಗಳೂರು ನಗರ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಬೆಂ.ನಗರ ವಿವಿ ಪದವಿಯು ಇಡೀ ಜಗತ್ತಿನಲ್ಲಿ ತಾವು ತೊಡಗಿಸಿಕೊಳ್ಳಲು ಪಾಸ್‌ಪೋರ್ಟ್ ಆಗಿದೆ. ಭಾರತದ ಬೌದ್ಧಿಕ ಬಂಡವಾಳ ಮತ್ತು ಅದರ ಶ್ರೀಮಂತ ಪರಂಪರೆಯ ರಾಯಭಾರಿಗಳಾಗಿ ‘ವಸುದೈವ ಕುಟುಂಬಕಂ’ಎಂಬ ಮನೋಭಾವವನ್ನು ನೀವು ಪ್ರದರ್ಶಿಸಬೇಕಿದೆ. ವೈವಿಧ್ಯಮಯ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳಿ, ಅಂತಾರಾಷ್ಟ್ರೀಯ ಸವಾಲುಗಳೊಂದಿಗೆ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಈ ಘಟಿಕೋತ್ಸವವು ಅಂತ್ಯವಲ್ಲ. ಬದಲಾಗಿ ಒಂದು ಅದ್ಭುತ ಆರಂಭವಾಗಿದೆ ಎಂಬುದನ್ನು ನೆನಪಿನಲ್ಲಿಡಿ. ನೀವು ಹೊಂದಿರುವ ಪದವಿ ಕೇವಲ ಕಾಗದದ ತುಂಡುಗಳಲ್ಲ. ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ದೃಢ ನಿಶ್ಚಯಕ್ಕೆ ಮಾಡಿದ ಹೂಡಿಕೆಗಳಾಗಿವೆ. ಆದರೆ, ನಿಮ್ಮ ಶಿಕ್ಷಣದ ನಿಜವಾದ ಮೌಲ್ಯವು ನೀವು ಅದನ್ನು ಹೇಗೆ ಅನ್ವಯಿಸಲು ಆಯ್ದುಕೊಳ್ಳುತ್ತೀರಿ ಎಂಬುದರಲ್ಲಿ ಅಡಗಿದೆ. ಜೀವನವು ಅದರ ಭಾಗವಾಗಿ ಸವಾಲುಗಳನ್ನು ಮತ್ತು ಸಂಕಷ್ಟಗಳನ್ನು ನೀಡುತ್ತದೆ. ಆದರೆ, ಅದೇ ಬದುಕು ಅಪಾರವಾದ ಆನಂದ ಮತ್ತು ಅಪೂರ್ವ ಅವಕಾಶಗಳನ್ನು ನೀಡುತ್ತದೆ ಎಂಬುದನ್ನು ಎಂಬ ನಂಬಿಕೆ ಇಡಿ ಎಂದರು.

ನಿಜವಾದ ನಾಯಕತ್ವವು ಇತರರನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಸೇವೆಯಲ್ಲಿ ಅಡಗಿದೆ. ನೈತಿಕತೆಯು ನಂಬಿಕೆ ಮತ್ತು ಗೌರವದ ಅಡಿಪಾಯವಾಗಿದೆ. ನಿಮ್ಮನ್ನು ಮೀರಿ ನೀವು ಜಗತ್ತನ್ನು ನೋಡಿ ಮತ್ತು ನಿಮ್ಮ ಸುತ್ತಲಿನವರನ್ನು ಮೇಲೆತ್ತಲು ಪ್ರಯತ್ನ ಮಾಡಿ. ಪ್ರತಿ ಸವಾಲನ್ನು ಧೈರ್ಯದಿಂದ ಎದುರಿಸಿ, ಪ್ರತಿ ಯಶಸ್ಸನ್ನು ವಿನಯದಿಂದ ಸ್ವೀಕರಿಸಿ ಮತ್ತು ಪ್ರತಿ ಸಂವಹನವನ್ನು ದಯೆಯಿಂದ ನಡೆಸಿರಿ. ನಿಮ್ಮ ಕಾರ್ಯಗಳನ್ನು ಸಹಾನುಭೂತಿಯಿಂದ ಮಾರ್ಗದರ್ಶನ ಮಾಡಿರಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂ.ನಗರ ವಿವಿ ಕುಲಪತಿ(ಪ್ರಭಾರ) ಪ್ರೊ.ಕೆ.ಆರ್.ಜಲಜಾ ಮತ್ತು ವಿವಿ ಕುಲಸಚಿವ(ಮೌಲ್ಯಮಾಪನ) ಪ್ರೊ.ಬಿ. ರಮೇಶ್ ಉಪಸ್ಥಿತರಿದ್ದರು.

39,780 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ 9 ಪಿಎಚ್.ಡಿ, 57 ಚಿನ್ನದ ಪದಕ ಒಳಗೊಂಡಂತೆ 32,486 ಪದವಿ ಹಾಗೂ 7,285 ಸ್ನಾತಕೋತ್ತರ ಪದವಿ ಸೇರಿ 39,780 ವಿದ್ಯಾರ್ಥಿಗಳು ಪದವಿ ಪ್ರದಾನ ಮಾಡಲಾಯಿತು.

ಯುವಕರ ಪ್ರಯತ್ನದಿಂದ ದೇಶದ ಪ್ರಗತಿ: ಗೆಹಲೋತ್

ವಿದ್ಯಾವಂತ ಯುವಕರು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಹುದು. ನೀವು ಯಾವುದೇ ಕ್ಷೇತ್ರಕ್ಕೆ ಹೋದರೂ - ಅದು ವಿಜ್ಞಾನ- ತಂತ್ರಜ್ಞಾನ ಕ್ಷೇತ್ರವಾಗಿರಲಿ, ವ್ಯವಹಾರ, ಕಲೆ ಅಥವಾ ಸಮಾಜ ಸೇವೆಯ ಕ್ಷೇತ್ರವಾಗಿರಲಿ, ನಿಮ್ಮ ಪ್ರಯತ್ನಗಳಿಂದ ದೇಶವು ಪ್ರಗತಿ ಸಾಧಿಸುತ್ತದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು.

ಯಾವುದೇ ರಾಷ್ಟ್ರದ ಅಭಿವೃದ್ಧಿಗೆ ಯುವ ಶಕ್ತಿಯೇ ಆಧಾರ ಎಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ಅವರು ಯುವಕರನ್ನು ಸ್ವಾವಲಂಬಿ, ಧೈರ್ಯಶಾಲಿ ಮತ್ತು ಆತ್ಮವಿಶ್ವಾಸದಿಂದ ಕೂಡಿರಲು ಪ್ರೇರೇಪಿಸಿದ್ದರು. ಪ್ರಾಚೀನ ಕಾಲದಿಂದಲೂ ಭಾರತವು ಬೌದ್ಧಿಕ ಸಂಪತ್ತಿನಲ್ಲಿ ಶ್ರೀಮಂತವಾಗಿದೆ. ವೇದಕಾಲದಿಂದ ಇಂದಿನವರೆಗೆ, ಭಾರತೀಯರು ಎಲ್ಲ ಕ್ಷೇತ್ರಗಳಲ್ಲಿ ಅನುಪಮ ಜ್ಞಾನವನ್ನು ಗಳಿಸಿದ್ದಾರೆ. ಖಗೋಳಶಾಸ್ತ್ರದಿಂದ ಭೂ ವಿಜ್ಞಾನ, ಗಣಿತ, ವೈದ್ಯಕೀಯ ಮತ್ತು ಇತರ ಹಲವು ಕ್ಷೇತ್ರಗಳವರೆಗೆ, ಭಾರತೀಯರ ಕೊಡುಗೆ ಇಡೀ ಜಗತ್ತಿಗೆ ಮುಖ್ಯವಾಗಿದೆ. ಗಣಿತದಲ್ಲಿ ಶೂನ್ಯ ಮತ್ತು ದಶಮಾಂಶವನ್ನು ಭಾರತೀಯ ಗಣಿತಜ್ಞರು ಮತ್ತು ಖಗೋಳಶಾಸ್ತ್ರಜ್ಞರು ಕಂಡುಹಿಡಿದರು ಎಂದರು.

ಶಿಕ್ಷಣ ಸಂಸ್ಥೆಗಳು ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಲು ಮೊದಲ ಆದ್ಯತೆ ನೀಡಬೇಕು. ಹಾಗೆಯೇ ಈ ಘಟಿಕೋತ್ಸವದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ರ‌್ಯಾಂಕ್ ಪಡೆದಿದ್ದಾರೆ. ಇದು ಶೈಕ್ಷಣಿಕವಾಗಿ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿರುವ ದ್ಯೋತಕವಾಗಿದೆ. - ಥಾವರ್ ಚಂದ್ ಗೆಹಲೋತ್, ರಾಜ್ಯಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net