

ಮಂಗಳೂರು : ಐಟಿಐ ಮತ್ತು ಜಿಟಿಟಿಸಿ ಕೋರ್ಸ್‌ಗಳನ್ನು ಕಲಿತವರಿಗೆ ಉದ್ಯೋಗದಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಒತ್ತು ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಆನಂದ್ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಜಿಲ್ಲಾ ಕೌಶಲ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರುಜಿಲ್ಲೆಯಲ್ಲಿ ಪ್ರಸಕ್ತ 26 ಐಟಿಐಗಳಿದ್ದು, ಈ ಪೈಕಿ 5 ಸರ್ಕಾರಿ ಮತ್ತು 21 ಖಾಸಗಿ ಸಂಸ್ಥೆಗಳಿವೆ. ಇವುಗಳಲ್ಲಿ ಒಟ್ಟು 1064 ಸೀಟುಗಳು ಲಭ್ಯವಿದ್ದರೂ, ಪ್ರಸಕ್ತ ವರ್ಷ ಕೇವಲ 497 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿರುವುದು ಕಳವಳಕಾರಿಯಾಗಿದೆ ಎಂದರು.
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಸರಕಾರಿ ಉಪಕರಣಾಗಾರ ತರಬೇತಿ ಕೇಂದ್ರ(ಜಿಟಿಟಿಸಿ) ಜಿಲ್ಲೆಯ ಏಕೈಕ ಜಿಟಿಟಿಸಿ ಕೇಂದ್ರವಾಗಿದೆ. ಶೇ.100 ಉದ್ಯೋಗಾವಕಾಶ ಇರುವ ವಿವಿಧ ಡಿಪ್ಲೊಮಾ ಕೋರ್ಸ್‌ಗಳು ಈ ಸಂಸ್ಥೆಯಲ್ಲಿದ್ದು, ಇಲ್ಲಿ ಕಲಿತವರಿಗೆ ವಿದೇಶದಲ್ಲಿಯೂ ಸಾಕಷ್ಟು ಬೇಡಿಕೆ ಇದೆ. ಪ್ರಸಕ್ತ ವರ್ಷ ಈ ಸಂಸ್ಥೆಯಲ್ಲಿ ಸಾಕಷ್ಟು ಸೀಟುಗಳು ಖಾಲಿ ಇವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಜಿಟಿಟಿಸಿ ಮತ್ತು ಐಟಿಐ ಕೋರ್ಸುಗಳಿಗೆ ಆಕರ್ಷಿಸಲು ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ನಡೆಸುವಂತೆ ಜಿ.ಪಂ. ಸಿಇಓ ಅವರು ತಿಳಿಸಿದರು.
ವಿವಿಧ ಇಲಾಖೆಗಳು ನಡೆಸುವ ಕೌಶಲ ತರಭೇತಿ ಕಾರ್ಯಕ್ರಮಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಆದ್ಯತೆ ನೀಡಬೇಕು. ಸ್ವಯಂ ಉದ್ಯೋಗ ತರಬೇತಿ ಪಡೆದವರಿಗೆ ಬ್ಯಾಂಕ್ ಸಾಲ ದೊರಕಿಸಿಕೊಡಲು ಆಯಾ ಇಲಾಖೆಗಳು ನೆರವು ನೀಡಬೇಕು. ಕೌಶಲ ಕೋರ್ಸ್‌ಗಳಲ್ಲಿ ತರಬೇತಿ ಪಡೆದವರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಕೈಗಾರಿಕೆ- ಉದ್ಯಮ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಉದ್ಯೋಗ ಸೇರಿದಂತೆ ವಿವಿಧ ಕೌಶಲ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿಯನ್ನೇ ಆಹ್ವಾನಿಸದಿರುವುದಕ್ಕೆ ತೀವ್ರ ಅಸಮಾಧನಾನ ವ್ಯಕ್ತಪಡಿಸಿದ ಅವರು, ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ , ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಮೀನುಗಾರಿಕಾ ಉಪನಿರ್ದೇಶಕ ದಿಲೀಪ್, ಕೃಷಿ ಜಂಟಿ ನಿರ್ದೇಶಕ ಕೆಂಪೇಗೌಡ, ಕೆಜಿಟಿಟಿಐ ನಿರ್ದೇಶಕ ಗಿರಿಧರ್ ಸಾಲ್ಯಾನ್, ಜಿಟಿಟಿಸಿ ಪ್ರಾಂಶುಪಾಲ ಲಕ್ಷ್ಮೀ ನಾರಾಯಣ ಸಿ.ಆರ್. ಉಪಸ್ಥಿತರಿದ್ದರು.