

ಜಮಖಂಡಿ: ತರಬೇತಿ ಪಡೆದ ಕೈಗಳಿಗೆ ಸಲಕರಣೆ, ಸಾಮಗ್ರಿಗಳನ್ನು ಉಪಯೋಗಿಸುವ ಕೌಶಲ ಕರಗತವಾಗುತ್ತದೆ. ಅದರಿಂದ ಅವಕಾಶಗಳು ತೆರೆದುಕೊಂಡು ಸ್ವಾಯತ್ತ ಜೀವನ ಸಾಗಿಸಲು ಸಹಾಯಕವಾಗುತ್ತದೆ ಎಂದು ಬಸವಜ್ಯೋತಿ ಪಪೂ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಹೇಳಿದರು.
ದಾವಣಗೆರೆಯ ಸ್ಫೂರ್ತಿ ನಗರ ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಐರಣಿಯ ಶ್ರೀ ಐರಣಿ ಮಹಾಸಂಸ್ಥಾನ ಹೊಳೆಮಠದ ಆಶ್ರಯದಲ್ಲಿ ಹುನ್ನೂರ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಹಾಗೂ ೋರ್ ಹ್ಯಾಂಡ್ ಚಿಟ್ ಂಡ್ಸ್ ಸಹಯೋಗದಲ್ಲಿ ಮಹಿಳೆಯರಿಗೆ ಹುನ್ನೂರಿನಲ್ಲಿ ಆಯೋಜಿಸಿದ್ದ 110 ದಿನಗಳ ಸ್ವಯಂ ಉದ್ಯೋಗ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಬುಧವಾರ ಅವರು ಮಾತನಾಡಿದರು.
ಸುಪ್ತವಾಗಿ ಅಡಗಿರುವ ಪ್ರತಿಭೆ ಬಳಸಿಕೊಂಡು ಉದ್ಯೋಗಕ್ಕೆ ಬೇಕಾಗುವ ಸಲಕರಣೆ ಮತ್ತು ಸಾಮಗ್ರಿಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಉದ್ಯೋಗ ಮಾಡಬೇಕು. ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ಸಾಗಿಸಲು ಕೌಶಲಯುಕ್ತ ಉದ್ಯೋಗ ಅಗತ್ಯ ಎಂದರು.
ಹನಗಂಡಿಯ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಡಾ. ಶಾರದಾ ಮುಳ್ಳೂರ ಮಾತನಾಡಿ, ಊಟ ಕೊಡುವವರಿಗಿಂತ ಊಟ ಸಂಪಾದಿಸುವ ಕಲೆ ಕಲಿಸಿಕೊಡುವವರು ಮುಖ್ಯ ಎಂದರು.
ಗ್ರಾಮ ಪ್ರಮುಖ ಚನ್ನಪ್ಪ ಬಿರಾದಾರ ಮಾತನಾಡಿ, ಸ್ವ ಉದ್ಯೋಗದಿಂದ ಸಂಪಾದಿಸಿ ಉಳಿಸಿದ ಹಣವನ್ನು ಮನೆಯಲ್ಲಿನ ಹುಂಡಿಗೆ ಹಾಕದೆ ಬ್ಯಾಂಕ್ ಖಾತೆಯಲ್ಲಿ ಉಳಿತಾಯ ಮಾಡಬೇಕು. ಅದರಿಂದ ಬಡ್ಡಿ ಹಣವನ್ನು ಗಳಿಸುವ ಜತೆಗೆ ಸಾಲಗಾರರಿಗೆ ಪ್ರಯೋಜನಕಾರಿ ಎನಿಸುತ್ತದೆ ಎಂದರು.
ಶಿಬಿರ ಪ್ರಾಯೋಜಿಸಿ, ಪ್ರೋತ್ಸಾಹಿಸಿದ ಶಂಕರ ಜಾಲಿಗಿಡದ, ಸದಾಶಿವ ಸೊನ್ನದ, ಶ್ರೀಶೈಲ ತೇಲಿ, ಚನ್ನಪ್ಪ ಬಿರಾದಾರ, ಶಿವಾನಂದ ಕೊಣ್ಣೂರ, ಬಸವರಾಜ ಬಳಿಗಾರ ಹಾಗೂ ಶಿಬಿರ ಆಯೋಜಿಸಿದ ಸ್ಪೂರ್ತಿ ಸಂಸ್ಥೆ ಅಧ್ಯಕ್ಷ ಗೂಳಪ್ಪ ಗೊಳಸಂಗಿ, ಕಾರ್ಯದರ್ಶಿ ಎಂ. ಗುಡ್ಡಪ್ಪ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿಬಿರಾರ್ಥಿಗಳಾದ ಸಾವಿತ್ರಿ ಹೊಸಮನಿ, ತಂಗೆಮ್ಮ ಸಾವಳಗಿ, ದಾಕ್ಷಾಯಿಣಿ ಕಡಪಟ್ಟಿ, ಶಿವಲೀಲಾ ನಾವಿ ಅನಿಸಿಕೆ ಹಂಚಿಕೊಂಡರು. ಶ್ರೀಬನಶಂಕರಿ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಡಪ್ಪ ಮರೇಗುದ್ದಿ ಇದ್ದರು.
ಪರಮೇಶ್ವರ ತೇಲಿ, ಪುಟ್ಟ ಬಾಲಕಿಯರಾದ ತ್ರಿಶಾ, ವಸುಂಧರಾ ಪ್ರಾರ್ಥನೆ ಗೀತೆ ಹಾಡಿದರು. ಶಿಬಿರಾರ್ಥಿಗಳು ಸಾಮೂಹಿಕ ಗೀತೆ ಹಾಡಿದರು. ಶಿಕ್ಷಕಿ ಜರೀನಾ ಗಡೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಎಂ. ಗುಡ್ಡಪ್ಪ ಸ್ವಾಗತಿಸಿ, ನಿರೂಪಿಸಿದರು.
ಶಿಬಿರದಲ್ಲಿ ಶಿಬಿರಾರ್ಥಿಗಳು ಬಟ್ಟೆಯಿಂದ ಸಿದ್ಧಪಡಿಸಿದ ಉಡುಪುಗಳು, ದಿಂಬುಗಳು, ಆಮೆಗಳು ಹಾಗೂ ಇತರೆ ವಸ್ತುಗಳನ್ನು ಪ್ರದರ್ಶಿಸಲಾಗಿತ್ತು. ಕೊನೆಯಲ್ಲಿ ಅಕ್ಷರ ಜ್ಞಾನದ ಮಹತ್ವ ಕುರಿತು ಶಿಬಿರಾರ್ಥಿಗಳು ಕಿರುನಾಟಕ ಪ್ರದರ್ಶಿಸಿದರು.