ಸ್ಕಿಲ್ ಲ್ಯಾಬ್ ಉಡುಗೊರೆ: ಮೈಸೂರು ವೈದ್ಯಕೀಯ ಕಾಲೇಜಿಗೆ ಶತಮಾನೋತ್ಸವದ ಕೊಡುಗೆ

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆ , ತರಬೇತಿಗೆ ವೇದಿಕೆಯಾಗುವ ವೈದ್ಯಕೀಯ ಕೌಶಲ ಪ್ರಯೋಗಾಲಯವು ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಎಂಎಂಸಿ ಆರ್‌ಐ) ತಲೆ ಎತ್ತಲಿದೆ.

ನಗರದ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಒಂದೇ ಸೂರಿನಲ್ಲಿ ಹೊರರೋಗಿಗಳ ವಿಭಾಗ(ಒಪಿಡಿ) ಕಟ್ಟಡದ ಬಳಿಕ ಈ ಸಂಸ್ಥೆಗೆ ದೊರೆತ ಮತ್ತೊಂದು ಶತಮಾನೋತ್ಸವದ ಉಡುಗೊರೆ ಇದಾಗಿದೆ. 100ನೇ ವರ್ಷಾಚರಣೆಗೆ ಪೂರಕವಾಗಿ ಇದು ಕಾರ್ಯರೂಪಕ್ಕೆ ಬರಲಿದೆ.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿವಿ ಕೊಡುಗೆ: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಸ್ಕಿಲ್‌ಲ್ಯಾಬ್ ನಿರ್ಮಿಸಿಕೊಡಲಿದ್ದು, ಇದಕ್ಕೆ ಈಗಾಗಲೇ ಅನುಮೋದನೆ ದೊರೆತಿದೆ.

ಎಂಎಂಸಿಆರ್‌ಐನ ಆಡಳಿತ ಬ್ಲಾಕ್ ಹಿಂಭಾಗದ ಆವರಣದಲ್ಲಿರುವ ಒಂದು ಎಕರೆ ಜಾಗದಲ್ಲಿ ಇದು ಸ್ಥಾಪನೆಯಾಗಲಿದೆ. ಇದಕ್ಕಾಗಿ ವೆಚ್ಚವಾಗುವ ಹಣವನ್ನು ಈ ವಿಶ್ವವಿದ್ಯಾಲಯವೇ ಭರಿಸಲಿದೆ. ಇದು ಪೂರ್ಣಗೊಂಡ ಬಳಿಕ ಎಂಎಂಸಿಆರ್‌ಐಗೆ ಹಸ್ತಾಂತರ ಮಾಡಲಿದೆ.

ಈ ನವೀನ ರೀತಿಯ ವೈದ್ಯಕೀಯ ಕೌಶಲ ಪ್ರಯೋಗಾಲಯಗಳನ್ನು ಕಡ್ಡಾಯವಾಗಿ ಮೆಡಿಕಲ್ ಕಾಲೇಜುಗಳಲ್ಲಿ ಸ್ಥಾಪಿಸಬೇಕೆಂದು ಭಾರತೀಯ ವೈದ್ಯಕೀಯ ಮಂಡಳಿಯು ಇತ್ತೀಚೆಗೆ ಸೂಚಿಸಿದೆ. ಅದರ ಭಾಗವಾಗಿ ಈ ಸೌಲಭ್ಯ ಮೈಸೂರು ವೈದ್ಯಕೀಯ ಕಾಲೇಜಿಗೆ ದೊರೆಯುತ್ತಿದೆ.
ರಾಜ್ಯದ ಪ್ರತಿಷ್ಠಿತ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸ್ಕಿಲ್‌ಲ್ಯಾಬ್ ಇದೆ.

ಆದರೆ, ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈ ಸವಲತ್ತು ಇಲ್ಲ. ಈ ಕೊರತೆಯನ್ನು ನೀಗಿಸಲು ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಈ ಉಪಕ್ರಮ ತೆಗೆದುಕೊಂಡಿದ್ದು, ಇದರಿಂದ ಎಂಎಂಸಿಆರ್‌ಐಯಲ್ಲಿ ವ್ಯಾಸಂಗ ಮಾಡುತ್ತಿರುವ ವೈದ್ಯಕೀಯ, ಪ್ಯಾರಾಮೆಡಿಕಲ್, ನರ್ಸಿಂಗ್ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆ, ತರಬೇತಿಗೆ ಹೆಚ್ಚಿನ ಅನುಕೂಲವಾಗಲಿದೆ.


ಒಳಾಂಗಣ ಕ್ರೀಡಾಂಗಣವೂ ನಿರ್ಮಾಣ:

ಹೊಸದಾಗಿ ನಿರ್ಮಾಣವಾಗುವ ಕಟ್ಟಡದ ನೆಲ ಮಹಡಿಯಲ್ಲಿ ಸ್ಕಿಲ್ ಲ್ಯಾಬ್ ಇರಲಿದ್ದು, ಮೊದಲ ಮಹಡಿಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ. ಕ್ರೀಡೆ, ವ್ಯಾಯಾಮ ಸೇರಿದಂತೆ ಇನ್ನಿತರ ದೈಹಿಕ ಚಟುವಟಿಕೆಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ತೊಡಗಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

ಪ್ರಾಯೋಗಿಕ ಕಲಿಕೆ ಪರಿಣಾಮಕಾರಿ: ವೈದ್ಯಕೀಯ ಕೌಶಲ ಪ್ರಯೋಗಾಲಯದಲ್ಲಿ ಮಾನವ ದೇಹದೊಂದಿಗೆ ಅಭ್ಯಸಿಸಬೇಕಾದ ಎಲ್ಲ ಕಾರ್ಯ ವಿಧಾನಗಳಿಗೆ ಸಂಬಂಧಿಸಿದ ಪ್ರಮುಖ ಮಾದರಿಗಳು ಇರಲಿವೆ. ಇವುಗಳು ಬಣ್ಣ, ಆಕೃತಿ, ಗಾತ್ರ ಹಾಗೂ ವಿನ್ಯಾಸದಲ್ಲಿ ಬಹುತೇಕ ಮಾನವ ದೇಹದ ಅಂಗಾಂಗಗಳಂತೆಯೇ ಇರುತ್ತವೆ.

ಇವುಗಳೊಂದಿಗಿನ ಕಲಿಕೆ ಹಾಗೂ ತರಬೇತಿಯು ಬಹಳಷ್ಟು ನೈಜತೆಯಿಂದ ಕೂಡಿರುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆ, ತರಬೇತಿ ಬಹಳವೇ ಪರಿಣಾಮಕಾರಿಯಾಗಿರುತ್ತದೆ ಎಂದು ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಿಣಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ವರದಾನ

ಇಲ್ಲಿ ಮುಖ್ಯವಾಗಿ ಎರಡು ಬಗೆಯ ಮಾದರಿಗಳಿರುತ್ತವೆ. ಒಂದು ಕೌಶಲಗಳ ಕಲಿಕೆಗಾಗಿ ಇರುವ ಸ್ಥಿರ ಮಾದರಿಗಳಾದರೆ, ಇನ್ನೊಂದು ಕಂಪ್ಯೂಟರ್ ಮತ್ತು ಬ್ಯಾಟರಿಗಳ ನೆರವಿನಿಂದ ಮಾನವ ದೇಹದಂತೆಯೇ ಚಲನವಲನಗಳನ್ನು ತೋರುವ ಮಾದರಿಗಳು ಇರುತ್ತವೆ.

ಹೃದಯ ಸ್ತಂಭನವಾದರೆ ಮಾಡಬೇಕಾದ ಹೃದಯ ಮತ್ತು ಶ್ವಾಸಕೋಶಗಳನ್ನು ಪುನರುಜ್ಜೀವನಗೊಳಿಸುವ ವಿಧಾನ, ಚರ್ಮದ ಗಾಯಗಳಿಗೆ ಹೊಲಿಗೆ ಹಾಕುವ ಪ್ರಕ್ರಿಯೆ, ಸಹಜ ಹೆರಿಗೆ ಮಾಡಿಸುವ ವಿಧಾನ..ಹೀಗೆ ವಿವಿಧ ಆರೋಗ್ಯ ಉಪಚಾರ, ಆರೈಕೆ, ಶಸ್ತ್ರಚಿಕಿತ್ಸೆಯನ್ನು ಮನುಷ್ಯ ದೇಹಾಕೃತಿಯ ಗೊಂಬೆ ಮಾದರಿಯ ಮೇಲೆ ಮೊದಲು ಪ್ರಯೋಗ ಮಾಡಲಾಗುತ್ತದೆ.

ಇಲ್ಲಿ ಕಲಿತು ನುರಿತ ತರಬೇತಿ ಪಡೆದ ಬಳಿಕ ವಾಸ್ತವವಾಗಿ ಮನುಷ್ಯ ಮೇಲೆ ಪ್ರಯೋಗ ಮಾಡಲು ಅನುಕೂಲವಾಗುತ್ತದೆ. ಇದರಿಂದ ತಪ್ಪುಗಳು ಕಡಿಮೆಯಾಗಿ ಅಡ್ಡಪರಿಣಾಮಗಳು ತಗ್ಗಲಿವೆ. ಹೀಗಾಗಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ಕಿಲ್ ಲ್ಯಾಬ್ ವರದಾನವಾಗಲಿದೆ.

ಈ ಕಾಲೇಜಿನಲ್ಲಿ ಪ್ರಸ್ತುತ 200 ಎಂಬಿಬಿಎಸ್, 153 ಸ್ನಾತಕೋತ್ತರ ವೈದ್ಯಕೀಯ, 100 ಬಿಎಸ್ಸಿ ನರ್ಸಿಂಗ್, 40 ಜಿಎನ್‌ಎಂ, 100 ಪ್ಯಾರಾ ಮೆಡಿಕಲ್, 50 ಬಿಎಸ್ಸಿ ಅಲ್ರೈಡ್ ಹೆಲ್ತ್ ಸೈನ್ಸ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರೆಲ್ಲ ಈ ಸ್ಕಿಲ್ ಲ್ಯಾಬ್ ಲಾಭವನ್ನು ಪಡೆದುಕೊಳ್ಳಲಿದ್ದಾರೆ.

ಅದ್ದೂರಿಯಾಗಿ ಶತಮಾನೋತ್ಸವ ಆಚರಣೆ

ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವ ಸಮಾರಂಭವನ್ನು ಸೆಪ್ಟಂಬರ್ ಅಥವಾ ಅಕ್ಟೋಬರ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಸಂಸ್ಥೆಯ ಶತಮಾನೋತ್ಸವ ಆಚರಣೆಗೆ ಈಗಾಗಲೇ ಚಾಲನೆ ದೊರೆತಿದೆ. ವರ್ಷವಿಡೀ ವಿವಿಧ ಚಟುವಟಿಕೆಗಳು, ಕಾರ್ಯಕ್ರಮಗಳು, ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಕೊನೆಯದಾಗಿ ನೂರರ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ.

ಹಳೇ ವಿದ್ಯಾರ್ಥಿಗಳಿಗಾಗಿ ಹುಡುಕಾಟ: ಈ ಕಾಲೇಜಿನಲ್ಲಿ ಕಲಿತ ಹಳೇ ವಿದ್ಯಾರ್ಥಿಗಳ ಸಮಾಗಮ ಮತ್ತು ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದೇಶ-ವಿದೇಶಗಳಲ್ಲಿ ಚದುರಿಹೋಗಿರುವ ಹಳೇ ವಿದ್ಯಾರ್ಥಿಗಳ ಸಂಪರ್ಕ ಸಾಧಿಸಿ ಶತಮಾನೋತ್ಸವಕ್ಕೆ ಕರೆತರುವ ಕೆಲಸಗಳು ನಡೆದಿವೆ. ಆದರೆ, 30-40 ವರ್ಷದಷ್ಟು ಹಿಂದಿನ ಹಿರಿಯ ವಿದ್ಯಾರ್ಥಿಗಳ ಸಂಪರ್ಕ ಸಾಧ್ಯವಾಗುತ್ತಿಲ್ಲ. ಇದುವೇ ಎಂಎಂಸಿಆರ್‌ಐಗೆ ತಲೆಬಿಸಿ ಮಾಡಿದೆ.

ಜತೆಗೆ, ಶತಮಾನೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದ್ದು, 100 ಸರ್ಕಾರಿ ಶಾಲೆಗಳಲ್ಲಿ ಇದು ನಡೆಯಲಿದೆ. ಸೆಪ್ಟೆಂಬರ್ ಹೊತ್ತಿಗೆ ಗುರಿ ಮುಟ್ಟುವ ಸಂಕಲ್ಪ ಮಾಡಲಾಗಿದೆ.

ವೈದ್ಯಕೀಯ ಕೌಶಲ ಪ್ರಯೋಗಾಲಯವನ್ನು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವೇ ನಿರ್ಮಿಸಿ ಕೊಡಲಿದೆ. ನಮ್ಮ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವ ವೈದ್ಯಕೀಯ ಸಂಬಂಧಿತ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇವರಿಗೆ ಕಲಿಕೆ, ತರಬೇತಿಯಲ್ಲಿ ಬಹಳಷ್ಟು ನಿಖರತೆ ದೊರೆಯಲಿದೆ. ನೈಜ ಪ್ರಯೋಗದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ.ಡಾ.ಕೆ.ಆರ್.ದಾಕ್ಷಾಯಿಣಿನಿರ್ದೇಶಕಿ, ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net