ಕೈಗಾರಿಕೆ ಉತ್ಪನ್ನಗಳ ಹೂಡಿಕೆಗೆ ಕೌಶಲ ಅಗತ್ಯ : ಕರ್ನಾಟಕ ರಾಜ್ಯ ಸಂಘದ ಅಧ್ಯಕ್ಷ ರಬೀಂದ್ರ ಶ್ರೀಕಂಠನ್

2
Published on

ಮೈಸೂರು: ಕೈಗಾರಿಕೆಗಳ ಉತ್ಪನ್ನಗಳಿಗೆ ಯಥೇಚ್ಛವಾಗಿ ಹೂಡಿಕೆಗಳು ಲಭ್ಯವಿದ್ದು, ಅವುಗಳನ್ನು ಪಡೆಯುವ ಕೌಶಲ ಗಳಿಸಿಕೊಳ್ಳಬೇಕು ಸಿಐಐ ಕರ್ನಾಟಕ ರಾಜ್ಯ ಸಂಘದ ಅಧ್ಯಕ್ಷ ರಬೀಂದ್ರ ಶ್ರೀಕಂಠನ್ ಹೇಳಿದರು.

ಕೈಗಾರಿಕೆಗಳ ಒಕ್ಕೂಟ (ಸಿಐಐ)ದ ಮೈಸೂರು ವಲಯದಿಂದ ನಗರದಲ್ಲಿ ಉತ್ಪಾದನಾ ಹಾಗೂ ತಂತ್ರಜ್ಞಾನದ ಕುರಿತ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸುಧಾರಿತ ಉತ್ಪಾದನೆಗೆ (ಅಡ್ವಾನ್ಸ್ ಮ್ಯಾನಿಫ್ಯಾಕ್ಚರಿಂಗ್) ಬೇಡಿಕೆ ಹೆಚ್ಚಿದ್ದು, ಹೂಡಿಕೆದಾರರು ಲಭ್ಯರಿದ್ದಾರೆ. ಸರ್ಕಾರವು ಮೌಲ್ಯವರ್ಧನೆ ಕುರಿತ ವಿಚಾರಗಳಿಗೆ ಹೂಡಿಕೆ ಮಾಡಲು ಉತ್ಸುಕತೆ ತೋರುತ್ತಿದೆ. ಆದ್ದರಿಂದ ಕೈಗಾರಿಕಾ ವಲಯದವರು ಒಂದೇ ವೇದಿಕೆಯಡಿ ಚರ್ಚಿಸಿ ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.

ಪಿಸಿಬಿ, ಚಿಪ್ ತಯಾರಿಕೆ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಡಿಫೆನ್ಸ್ ಟೆಕ್ನಾಲಜಿಗಳ ತಯಾರಿಕೆಯಲ್ಲಿ ಎಐ ಬಳಕೆಯಲ್ಲಿದ್ದು, ಮೈಸೂರು, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಭಾಗದಲ್ಲಿ ಹೆಚ್ಚಾಗಿ ಉತ್ಪಾದಿಸುವ ವಸ್ತುಗಳ ತಯಾರಿಕೆಯಲ್ಲಿ ಈ ತಂತ್ರಜ್ಞಾನ ಬಳಕೆಯಾಗುತ್ತಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದೊಂದಿಗೆ ಬೆರೆತ್ತಿದ್ದು, ಅದರ ಬಗ್ಗೆ ಕರ್ನಾಟಕದಲ್ಲಿ 700 ಜನರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಸಿಐಐ ಕರ್ನಾಟಕ ರಾಜ್ಯ ಸಂಘದ ನಿರ್ಗಮಿತ ಅಧ್ಯಕ್ಷ ವಿಜಯ್ ಕೃಷ್ಣನ್ ವೆಂಕಟೇಶನ್ ಮಾತನಾಡಿ, ಭಾರತದ ಬೆಳವಣಿಗೆ ಕುರಿತು ವಿಶ್ವವೇ ಗಮನಹರಿಸುತ್ತಿದೆ. ಇದಕ್ಕೆ ಅನುಗುಣವಾಗಿ ನಾವು ಕರ್ತವ್ಯ ನಿರ್ವಹಿಸಬೇಕು. ಭವಿಷ್ಯದ ಬಗ್ಗೆ ಯೋಚಿಸಿ ಸೃಜನಾತ್ಮಕ ಸಂಶೋಧನೆ ನಡೆಸಿದಾಗ ಇತರೆ ದೇಶಗಳೊಂದಿಗೆ ಸ್ಪರ್ಧಿಸಲು ಸಾಧ್ಯ ಎಂದರು.

ಉದ್ಯಮಿ ಪವನ್ ರಂಗ ಮಾತನಾಡಿ, ಕೈಗಾರಿಕಾ ಕ್ಷೇತ್ರದಲ್ಲಿ ಭಾರತದ ಬ್ರಾಂಡ್ ನಿರ್ಮಾಣವಾಗಬೇಕಾದ ಅಗತ್ಯವಿದೆ. ದೇಶಕ್ಕಾಗಿ ನಾವೆಲ್ಲಾ ಒಂದಾಗಿ ಕೆಲಸ ಮಾಡಬೇಕು. ಗುಣಮಟ್ಟದ ನಂಬಿಕೆ ನೀಡಿದರೆ, ದೇಶದ ಆರ್ಥಿಕತೆಗೆ ಸಹಾಯವಾಗುವ ವ್ಯವಹಾರ ನಿರೀಕ್ಷಿಸಲು ಸಾಧ್ಯ ಎಂದು ತಿಳಿಸಿದರು.

ಮೈಸೂರು ವಲಯದ ಮಾಜಿ ಅಧ್ಯಕ್ಷ ವಿ.ಈಶ್ವರ್‌ರಾವ್, ಸಿಐಐ ಮೈಸೂರು ವಲಯದ ಅಧ್ಯಕ್ಷ ನಾಗರಾಜ್ ಗರ್ಗೇಶ್ವರಿ, ಉಪಾಧ್ಯಕ್ಷ ಉತ್ಸವ್ ಅಗರ್ವಾಲ್, ಸಂಚಾಲಕ ಕಿರಣ್ ರಂಗ, ಜೆ.ಹರಿಹರ ಮಹಾದೇವನ್, ಸಿಲೈನ್ ಸ್ಯಾಗೋಟ್, ಮನೀಷ್ ಶರ್ಮಾ, ವಿ.ಜಗನ್ನಾಥ್, ರಾಕೇಶ್ ಕೊಮ್ಮಿನೇನಿ, ಭೂಷಣ್ ಅಯ್ಯರ್, ಕೆ.ಅಜಿತ್, ಕೌಶಲ್ ಜಾಡಿಯಾ, ಕಾಂತೇಶ್‌ರಾವ್ ಸೊರಬ್, ನಿಪುಣ್ ಶರ್ಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net