

ಮಡಿಕೇರಿ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ದಿ ಆರ್ಗನೈೇಷನ್ ಫಾರ್ ದ ಡೆವಲಪ್‌ಮೆಂಟ್ ಆಫ್ ಪೀಪಲ್(ಒಡಿಪಿ) ಮೈಸೂರು ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆ, ಜಿಲ್ಲಾ ಕಾರಾಗೃಹ, ಮಡಿಕೇರಿ, ಇವರುಗಳ ಸಹಯೋಗದೊಂದಿಗೆ ಜೈಲು ಕೈದಿಗಳ ಜೀವನೋಪಾಯ ಮತ್ತು ಪುನರ್ವಸತಿ ಯೋಜನೆಯಡಿ ಎಲೆಕ್ಟ್ರಿಷಿಯನ್ ಹಾಗೂ ಪ್ಲಂಬಿಂಗ್ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಂಜಯ್ ಜಿತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಮಗೆ ತಪ್ಪಿನ ಅರಿವಾಗಿ ಸುಧಾರಣೆ ಹೊಂದುವಂತೆ ತರಬೇತಿ ಕಾರ್ಯಕ್ರಮ ಮಾಡಲಿದೆ. ನಿಮ್ಮ ಬಗ್ಗೆ ನೀವು ಯೋಚಿಸಿದ್ದಲ್ಲಿ ಮಾತ್ರ ಪರಿವರ್ತನೆ ಜತೆಗೆ ಅಭಿವೃದ್ಧಿ ಹೊಂದುತ್ತೀರಿ ಎಂದರು.
ನಿಮ್ಮ ಕುಟುಂಬದವರು ನೀವು ಹೊಸ ವ್ಯಕ್ತಿಗಳಾಗಿ ಹೊರ ಬರುವುದುದನ್ನು ಕಾಯುತ್ತಿದ್ದಾರೆ. ಎಲೆಕ್ಟ್ರಿಷಿಯನ್ ಹಾಗೂ ಪ್ಲಂಬಿಂಗ್ ತರಬೇತಿ ೧ ತಿಂಗಳು ನಡೆಯುತ್ತಿದ್ದು, ಆಸಕ್ತಿ ವಹಿಸಿ ಕಲಿಯಬೇಕು. ನಾನು ನಿಮ್ಮನ್ನು ಹೊರಗಡೆ ನೋಡಿದಾಗ, ಸ್ವ-ಉದ್ಯೋಗ ನಡೆಸುತ್ತಾ ತಮ್ಮ ಕಾಲಮೇಲೆ ನಿಂತಿರುವ ಕಂಡರೆ ತರಬೇತಿ ನೀಡಿದ್ದು ಸಾರ್ಥಕತೆ ಪಡೆದಂತೆ ಎಂದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ವಿ.ರಮೇಶ್ ಬಾಬು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜೈಲಿನಿಂದ ಹೊರಹೋದ ನಂತರ ನಿಮ್ಮದೇ ಜೀವನ ಕಟ್ಟಿಕೊಂಡು ಸ್ವಾವಲಂಬಿ ಬದುಕು ಪಡೆದು ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಎಂಬುದು ತರಬೇತಿಯ ಮುಖ್ಯ ಉದ್ದೇಶವಾಗಿದೆ. ನೀವು ಸೋಲನ್ನು ಒಪ್ಪದೆ, ಜೀವನದಲ್ಲಿ ಎದ್ದೇಳಬೇಕು. ಅದಕ್ಕಾಗಿ ಈ ತರಬೇತಿ ನಿಮಗೆ ಅವಕಾಶ ಕಲ್ಪಿಸಿದೆ. ಸಕಾರಾತ್ಮಕವಾಗಿ ಉಪಯೋಗಿಸಿಕೊಳ್ಳುಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಒಡಿಪಿ ಸಂಸ್ಥೆಯ ನಿರ್ದೇಶಕ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಮಾತನಾಡಿ, ನಿಮ್ಮ ಕುಟುಂಬದವರಿಗೆ ಆಸರೆಯಾಗಬೇಕು. ಒಳ್ಳೆಯ ಜೀವನ ನಡೆಸುವುದರ ಮೂಲಕ ಸಮಾಜದಲ್ಲಿ ಮಾದರಿಯಾಗಬೇಕು. ಒಬ್ಬರಿಗೊಬ್ಬರು ಉಪಕಾರಿಗಳು ಹಾಗೂ ಸಹಕಾರಿಯಾಗಬೇಕು. ಬೇರೆಯವರಿಗೆ ಭಾರವಾಗಬಾರದು. ಇಲ್ಲಿ ಏರ್ಪಡಿಸಿರುವ ಕೌಶಲ್ಯ ತರಬೇತಿಯನ್ನು ಆಸಕ್ತಿಯಿಂದ ಕಲಿತು ನೀವು ಇಲ್ಲಿಂದ ಹೊರ ಹೋದ ಮೇಲೆ ಸ್ವಾವಲಂಬಿಯಾಗಿ ಜೀವನ ಸಾಗಿಸುವಂತಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಬಾರ್ಡ್‌ನ ಪ್ರಮುಖರಾದ ಟಿ.ರಮೇಶ್ ಹಾಗೂ ಇತರರು ಉಪಸ್ಥಿತರಿದ್ದರು.