ಶಿವಮೊಗ್ಗದಲ್ಲಿ ಕೌಶಲಾಭಿವೃದ್ಧಿ ಕೇಂದ್ರ: ಡಿಸಿ ಡಾ. ಸೆಲ್ವಮಣಿ

15 smg 2
ಇಂಜಿನಿಯರ್ಸ್‌ ದಿನಾಚರಣೆಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಆರ್.ಸೆಲ್ವಮಣಿ, ಎನ್.ಗೋಪಿನಾಥ್ ಮುಂತಾದವರು ಪುಷ್ಪನಮನ ಸಲ್ಲಿಸಿದರು. ಜಿ.ವಿಜಯಕುಮಾರ್, ವಸಂತ ಹೋಬಳಿದಾರ್ ಇತರರಿದ್ದರು.
Published on

ಶಿವಮೊಗ್ಗ: ದೇಶದ ಸಮಗ್ರ ಅಭಿವೃದ್ಧಿಗೆ ಸರ್ ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ. ಜಿಲ್ಲೆ ಇಂದು ಹಲವು ರಂಗಗಳಲ್ಲಿ ಗುರುತಿಸಿಕೊಳ್ಳಲು ಅವರ ದೂರದೃಷ್ಟಿಯೇ ಕಾರಣ. ಭದ್ರಾವತಿಯಲ್ಲಿ ಎರಡು ಬೃಹತ್ ಕಾರ್ಖಾನೆ ಆರಂಭಿಸಿದ್ದು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಯಿತು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಶುಕ್ರವಾರ ಏರ್ಪಡಿಸಿದ್ದ ಇಂಜಿನಿಯರ್ಸ್‌ ಡೇ ಉದ್ಘಾಟಿಸಿದ ಅವರು, ವಿಶ್ವೇಶ್ವರಯ್ಯ ಅವರು ಈ ನಾಡು ಕಂಡು ಅದ್ಭುತ ವ್ಯಕ್ತಿ. ಉದ್ದಿಮೆಗಳ ಅಭಿವೃದ್ಧಿಗೆ ಕೌಶಲ ಬಹಳ ಮುಖ್ಯ ಎಂಬುದನ್ನು ದಶಕಗಳ ಹಿಂದೆಯೇ ಸರ್‌ಎಂವಿ ಸಾಬೀತು ಪಡಿಸಿದ್ದಾರೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಶಿವಮೊಗ್ಗದಲ್ಲಿ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸುವ ಚಿಂತನೆ ನಡೆಸಿದೆ. ಇದರಿಂದ ಇಲ್ಲಿ ಕೈಗಾರಿಕೆಗಳು ಯಶಸ್ವಿಯಾಗಲು ಸಹಕಾರಿಯಾಗುತ್ತದೆ. ಸರ್ಕಾರದ ಸಹಾಯದಿಂದ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ನಿವೇಶನ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಉದ್ದಿಮೆಗಳಿಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದ ದೇಶದ ಪ್ರಮುಖ ನಗರಗಳಿಗೂ ವಿಮಾನಯಾನ ಕಲ್ಪಿಸಲಾಗುವುದು. ಬೆಂಗಳೂರಿಗೆ ಇನ್ನೊಂದು ವಿಮಾನ ಶೀಘ್ರವೇ ಸಂಚಾರ ಆರಂಭಿಸಲಿದೆ ಎಂದು ತಿಳಿಸಿದರು.
ಹಾರನಹಳ್ಳಿ ಕೆ.ಮಂಜಪ್ಪ ಅಂಡ್ ಕೋ.ನ ಎಚ್.ಎಂ.ಲೀಲಾಮೂರ್ತಿ, ವಿಜಯ್ ಟೆಕ್ನೋಕ್ರಾಟ್ಸ್‌ನ ಕಾರ್ಯಕಾರಿ ನಿರ್ದೇಶಕ ಡಿ.ಜಿ.ಬೆನಕಪ್ಪ ಅವರನ್ನು ಸನ್ಮಾನಿಸಲಾಯಿತು. ಪ್ರಣವ್ ಪ್ಯಾಕೇಜಿಂಗ್, ಶಿವಾಜಿ ಆಗ್ರೋ ಕಾಂಪೊನೆಂಟ್ಸ್, ಎನ್.ಎನ್. ಇಂಜಿನಿಯರಿಂಗ್‌ಗೆ 2023ನೇ ಸಾಲಿನ ವಾಣಿಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಾರ್ಥನಾ ಇಂಜಿನಿಯರಿಂಗ್‌ನ ಸೂಪರ್‌ವೈಸರ್ ಕೆ.ವೇದನಾಥನ್, ವೋಲ್‌ಮ್ಯಾಕ್ ಕಾಂಪೊನೆಂಟ್ಸ್‌ನ ಮೇಲ್ವಿಚಾರಕ ಸಿ.ವೀರೇಂದ್ರ ಅವರಿಗೆ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸರ್‌ಎಂವಿ ಜನ್ಮದಿನದ ಅಂಗವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ಐಐಎಫ್ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್, ಸಂಘದ ಪದಾಕಾರಿಗಳಾದ ವಸಂತ್ ಹೋಬಳಿದಾರ್, ಜಿ.ವಿಜಯಕುಮಾರ್, ಬಿ.ಆರ್.ಸಂತೋಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net