

ಮಂಡ್ಯ: ಸರ್ಕಾರದಿಂದ ಸಿಗುವ ಸಾಲ ಸೌಲಭ್ಯ ಹಾಗೂ ಕೌಶಲ ತರಬೇತಿಗಳ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ ಜಿಲ್ಲಾ ಕೌಶಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಕೌಶಲ ತರಬೇತಿಗಳ ಬಗ್ಗೆ ಉಚಿತವಾಗಿ ತರಬೇತಿ ನೀಡುತ್ತಿದ್ದು, ಈ ಬಗ್ಗೆ ಅರಿವು ಮೂಡಿಸಿ ಕೌಶಲ ತರಬೇತಿಗಳನ್ನು ಹೆಚ್ಚಿಸಬೇಕು ಎಂದು ಸೂಚಿಸಿದರು.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯವರು ಸ್ಥಳೀಯವಾಗಿ ಯಾವುದಕ್ಕೆ ಹೆಚ್ಚು ಒಲವಿದೆ ಎಂದು ತಿಳಿದುಕೊಂಡು ಅಂತಹ ಕೌಶಲ ಯೋಜನೆಯನ್ನು ಹೆಚ್ಚು ಹೆಚ್ಚು ಜಾರಿಗೊಳಿಸಬೇಕು. ಈ ಮೂಲಕ ಉದ್ಯಮಶೀಲತೆಗೆ ಆದ್ಯತೆ ಕೂಡಬೇಕು. ಸಿ.ಎಂ.ಕೆ.ಕೆ.ವೈ ತರಬೇತಿ, ಜಿಲ್ಲಾ ಕೌಶಲ ತರಬೇತಿ, ಇಂಡಸ್ಟ್ರೀ ಲಿಂಕೇಜ್ ಸೆಲ್, ಸ್ವಯಂ ಉದ್ಯೋಗ, ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ, ಸ್ಪೋಕನ್ ಇಂಗ್ಲೀಷ್ ತರಬೇತಿ ಸೇರಿದಂತೆ ವಿವಿಧ ರೀತಿಯ ಕೌಶಲ ಯೋಜನೆಗಳಿವೆ. ಇವೆಲ್ಲವನ್ನೂ ಸಕಾಲದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಜಿಲ್ಲೆಯ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್, ಜಂಟಿ ಕೃಷಿ ನಿರ್ದೇಶಕ ವಿ.ಅಶೋಕ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಯೋಜನಾ ನಿರ್ದೇಶಕಿ ತುಷಾರಮಣಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಇತರರಿದ್ದರು.