ಪ್ರತಿಭಾವಂತರ ಉನ್ನತ ವ್ಯಾಸಂಗಕ್ಕೆ ನೆರವು, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಭರವಸೆ, ಜ್ಞಾನದೀಪ, ಸುಜ್ಞಾನನಿಧಿ ಯೋಜನೆ ಮಂಜೂರಾತಿ ಪತ್ರ ವಿತರಣೆ

IMG-20250821-WA0005.jpg
Published on

ಹುಬ್ಬಳ್ಳಿ: ಬಡತನದ ಕಾರಣಕ್ಕೆ ಅನೇಕ ಪಾಲಕರಿಗೆ ಮಕ್ಕಳನ್ನು ಶಾಲೆ, ಕಾಲೇಜಿಗೆ ಕಳಿಸಲು ಆಗುವುದಿಲ್ಲ, ಇದಕ್ಕಾಗಿ ವಿದ್ಯಾರ್ಥಿ ವೇತನ ಹಾಗೂ ಶಿಕ್ಷಕರಿಲ್ಲದ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ಒದಗಿಸುವ ಯೋಜನೆ ಜಾರಿಗೆ ತರಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಧಾರವಾಡದ ರಾಯಾಪುರದಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ಎಸ್ ಕೆಡಿಆರ್ ಡಿಪಿ) ಬಿಸಿ ಟ್ರಸ್ಟ್ ಧಾರವಾಡ ಜಿಲ್ಲೆ ವತಿಯಿಂದ ಪ್ರಾದೇಶಿಕ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಧಾರವಾಡ ಜಿಲ್ಲಾ ವ್ಯಾಪ್ತಿಯ ಜ್ಞಾನದೀಪ ಶಿಕ್ಷಕರು ಹಾಗೂ ಸುಜ್ಞಾನನಿಧಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರಾತಿ ಪ್ರತ ವಿತರಣೆ ಮಾಡಿ ಅವರು ಮಾತನಾಡಿದರು.

ಕಲಿಕೆ ಮುಂದುವರಿಸುವ ಆಸಕ್ತಿ ಇರುವ ಪ್ರತಿಭಾವಂತರಿಗೆ ನೆರವು ನೀಡಲು ಸಿದ್ಧರಿದ್ದೇವೆ. ಅವಕಾಶಗಳು ಸಾಕಷ್ಟಿವೆ. ಅವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು. ಗುರಿ ನಿಮ್ಮದಾದರೆ ಅದಕ್ಕೆ ಬೇಕಾದ ಸಹಾಯ ಮಾಡಲು ನಾವು ಸದಾ ಸಿದ್ಧ ಎಂದು ಅವರು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಸರ್ಕಾರವು ಹೆಣ್ಣು ಮಕ್ಕಳು ಕೂಡ ಈಗ ಆರ್ಮಿ ಸೇರಲು ಅವಕಾಶ ಕಲ್ಪಿಸಿದೆ. ಅವಕಾಶಗಳು ಎಲ್ಲ ಕಡೆಯಿಂದ ತೆರೆದುಕೊಳ್ಳುತ್ತಿವೆ. ಅವುಗಳನ್ನು ಚೆನ್ನಾಗಿ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಯೋಜನಾ ನಿರ್ದೇಶಕ ಪ್ರದೀಪ ಶೆಟ್ಟಿ ಮಾತನಾಡಿ, 2007ರಿಂದ 2025ರ ವರೆಗೆ ಸುಜ್ಞಾನನಿಧಿ ಅಡಿ ರಾಜ್ಯದಲ್ಲಿ 1.25 ಲಕ್ಷ ವಿದ್ಯಾರ್ಥಿಗಳಿಗೆ ಒಟ್ಟು 152.75 ಕೋಟಿ ರೂ. ಶಿಷ್ಯವೇತನ ನೀಡಲಾಗಿದೆ. ಜ್ಞಾನದೀಪ ಶಿಕ್ಷಕರ ಯೋಜನೆ ಅಡಿ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಜ್ಞಾನದೀಪ ಯೋಜನೆಯ ಶಿಕ್ಷಕಿ ಸುನಿತಾ ನಾಯ್ಕ ಮಾತನಾಡಿ, ದಾಂಡೇಲಿ ತಾಲೂಕಿನ ಗ್ರಾಮವೊಂದರ ಶಾಲೆ ಶಿಕ್ಷಕರು ಹಾಗೂ ಸೌಲಭ್ಯಗಳಿಲ್ಲದೇ ಮುಚ್ಚುವ ಹಂತ ತಲುಪಿತ್ತು. ಇರುವ ಶಿಕ್ಷಕರಿಗೆ 2.5 ವರ್ಷದಿಂದ ಸಂಬಳ ಇರಲಿಲ್ಲ. ಧರ್ಮಸ್ಥಳ ಕ್ಷೇತ್ರದ ಆಶೀರ್ವಾದದಿಂದ ಇದೀಗ ಉತ್ತುಂಗಕ್ಕೆ ಬಂದಿದೆ. ಅತಿಥಿ ಶಿಕ್ಷಕರನ್ನು ಒದಗಿಸುವ ಮೂಲಕ ಶಾಲೆಯಲ್ಲಿ ಇದೀಗ ಮಕ್ಕಳ ಕಲರವ ಕೇಳಿಬರುವಂತೆ ಮಾಡಲಾಗಿದೆ ಎಂದರು.

ವಿದ್ಯಾರ್ಥಿ ವೇತನ ಮಂಜೂರಾತಿ ಪತ್ರ ಪಡೆದ ಹೇಮಾ ಮಾತನಾಡಿ, ತಂದೆಯನ್ನು ಕಳೆದುಕೊಂಡ ನನಗೆ ವಿದ್ಯಾಭ್ಯಾಸ ಮುಂದುವರಿಸುವುದು ಕಷ್ಟವಾಗಿತ್ತು. ತಾಯಿ ಕೂಲಿ ಕೆಲಸ ಮಾಡುತ್ತಾಳೆ. ಇಂತಹ ಸಂದರ್ಭದಲ್ಲಿ ಶಿಷ್ಯವೇತನ ಬಹಳಷ್ಟು ಅನುಕೂಲವಾಗಲಿದೆ ಎಂದರು.

ಗೌರವಾರ್ಪಣೆ: ವಿಜಯವಾಣಿಯ ಪ್ರತಿಷ್ಠಿತ ವಿಜಯರತ್ನ ಇಂಟರ್ ನ್ಯಾಷನಲ್ ಪ್ರಶಸ್ತಿಗೆ ಭಾಜನರಾದ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಜನಜಾಗೃತಿ ವೇದಿಕೆ ವತಿಯಿಂದ ಪೀರಾಜಿ ಖಂಡೇಕರ, ರಮೇಶ ಮಹದೇವಪ್ಪನವರ ಇತರರು ಸನ್ಮಾನಿಸಿದರು.

ಧರ್ಮಸ್ಥಳ ಸಂಘದ ವಿವಿಧ ವಿಭಾಗಗಳ ಪದಾಧಿಕಾರಿಗಳು ಗೌರವ ಸಲ್ಲಿಸಿದರು.
ಎಸ್ ಡಿಎಂ ಕಾರ್ಯದರ್ಶಿ ಜೀವಂದರಕುಮಾರ, ವಸಂತ ಅರ್ಕಾಚಾರ, ಯೋಜನೆಯ ನೂರಾರು ಫಲಾನುಭವಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net