

ಮೈಸೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಹಿಳೆಯರಿಗೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ಶ್ರೀರಂಗಪಟ್ಟಣದ ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.
ನಗರದ ಜೆ.ಕೆ.ಮೈದಾನದ ಎಂಎಂಸಿ ಅಮೃತ ಮಹೋತ್ಸವ ಭವನದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ಎಸ್‌ಕೆಡಿಆರ್‌ಡಿಪಿ) ಹಮ್ಮಿಕೊಂಡಿದ್ದ ‘ಯೋಜನೆಯ ತಿಲಕ್‌ನಗರ ವಲಯದ 9 ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಮತ್ತು ಬೀದಿ ಬದಿ ವ್ಯಾಪಾರಿ ಸಂಘಗಳ ಉದ್ಘಾಟನೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಸಬಲೀಕರಣಕ್ಕೆ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ. ಸರ್ಕಾರ ಮಹಿಳೆಯರು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಹಲವಾರು ಯೋಜನೆಗಳನ್ನು ರೂಪಿಸಿದರೂ ಅದು ಪರಿಣಾಮಕಾರಿಯಾಗಿ ತಲುಪುತ್ತಿಲ್ಲ. ಅದೇ ರೀತಿ ಬ್ಯಾಂಕ್‌ಗಳಲ್ಲಿ ಎಲ್ಲರಿಗೂ ಸಾಲ ಸೌಲಭ್ಯ ದೊರೆಯುವುದಿಲ್ಲ. ಆದರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರಿಗೆ ಸುಲಭವಾಗಿ ಸಾಲಸೌಲಭ್ಯ ನೀಡಿ ಅವರ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು ಪ್ರಯತ್ನಿಸುತ್ತಿದೆ. ಪ್ರತಿಯೊಂದು ಕುಟುಂಬದ ಪರಿಸ್ಥಿತಿ ಉತ್ತಮ ಪಡಿಸುವ ಶಕ್ತಿ ಮಹಿಳೆಯರಿಗೆ ಇದೆ. ಹೀಗಾಗಿ ಮಹಿಳೆಯರನ್ನು ಗುರುತಿಸಿ ಅವರನ್ನು ಸಂಘದ ವ್ಯವಸ್ಥೆಯಡಿ ತಂದು ಸಾಲ ಸೌಲಭ್ಯಗಳನ್ನು ನೀಡುತ್ತಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ 30 ವರ್ಷದ ಹಿಂದೆ ಸಣ್ಣ ಪ್ರಮಾಣದಲ್ಲಿ ಆರಂಭವಾಗಿ ಇಂದು ರಾಜ್ಯದಾದ್ಯಂತ ವಿಸ್ತರಿಸಿದೆ. ಈ ಸಂಸ್ಥೆಯ ಕಾರ್ಯಕರ್ತರು, ಸದಸ್ಯರು ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುತ್ತಿರುವುದರಿಂದಲೇ ರಾಜ್ಯದಾದ್ಯಂತ ಕಾರ್ಯಕ್ಷೇತ್ರ ವಿಸ್ತಾರಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸದಸ್ಯರಾದ ಎಂ.ಡಿ.ನಾಗರಾಜು, ರಮೇಶ್, ರಂಗಸ್ವಾಮಿ, ಜೀವಧಾರ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಎಸ್.ಇ.ಗಿರೀಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮು ನೆಲಿತ್ತಾಯ, ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ್, ಯೋಜನಾಧಿಕಾರಿ ಸಂದಿನಿ ಶೇಟ್, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ಹಾಗೂ ಇತರರು ಇದ್ದರು.