

ಹುಬ್ಬಳ್ಳಿ: ಇಲ್ಲಿಯ ನವನಗರದ ಶ್ರೀ ವೀರಭದ್ರೇಶ್ವರ ರೋಲರ್ ಸ್ಕೇಟಿಂಗ್ ಹಾಗೂ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಸೋಮವಾರ ಸ್ಕೇಟಿಂಗ್ ರ್ಯಾಲಿ ಆಯೋಜಿಸಲಾಗಿತ್ತು.
ನವನಗರದ ಪೋಸ್ಟ್ ಆಫೀಸ್ ನಿಂದ ಆರಂಭವಾದ ರ್ಯಾಲಿಯಲ್ಲಿ ಮಕ್ಕಳು ಜಯಘೋಷ ಕೂಗಿ ಗಮನ ಸೆಳೆದರು. ಸ್ವಚ್ಛತೆ ಹಾಗೂ ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ರ್ಯಾಲಿ ಆಯೋಜಿಸಲಾಗಿತ್ತು.
ರ್ಯಾಲಿ ಉದ್ಘಾಟಿಸಿದ ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ ಮಾತನಾಡಿ, ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗದೇ ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ ಎಂದರು.
ಸ್ಕೇಟಿಂಗ್ ಕೋಚ್ ವಿರುಪಾಕ್ಷ ಕಮ್ಮಾರ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಅಕಾಡೆಮಿ ಚೇರ್ಮನ್ ಮಂಗಳಾ ಎಸ್. ಕಮ್ಮಾರ, ಅಧ್ಯಕ್ಷ ಶಂಕರ ವಿ. ಕಲಕೇರಿ, ಡಾನ್ ಬಾಸ್ಕೋ ಶಾಲೆ ಮಕ್ಕಳು, ಪಾಲಕರು ಉಪಸ್ಥಿತರಿದ್ದರು.