ನಂದೇಶ್ವರದಲ್ಲಿ ಸಂಸ್ಕೃತವೇ ನಂದಾದೀಪ!

IMG-20231227-WA0032.jpg
Published on


2,500ಕ್ಕೂ ಅಧಿಕ ಜನರಿಂದ ನಿತ್ಯ ಸಂವಹನ ಕಮರಿಮಠದ ದುಂಡೇಶ್ವರ ಸ್ವಾಮೀಜಿ ಪ್ರೇರಣೆ
ಚಿದಾನಂದ ಪಾಟೀಲ ನಂದೇಶ್ವರ (ಬೆಳಗಾವಿ)

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಸಂಸ್ಕೃತ ಭಾಷೆ ಇಂದಿಗೂ ಜೀವಂತವಾಗಿದೆ. ಗ್ರಾಮದಲ್ಲಿನ 2500ಕ್ಕೂ ಅಧಿಕ ಜನರು ನಿತ್ಯದ ಚಟುವಟಿಕೆಗಳಲ್ಲಿ ಸಂಸ್ಕೃತ ಭಾಷೆಯನ್ನೆ ಬಳಸುತ್ತಿದ್ದಾರೆ. ಇದೆಲ್ಲದಕ್ಕೂ ಪ್ರೇರಣೆ ಎನ್ನುವಂತೆ ಗ್ರಾಮದ ಮುಧುರಖಂಡಿ ಕಮರಿಮಠ ಸದ್ಗುರು ಶ್ರೀ ದುಂಡೇಶ್ವರ ಸ್ವಾಮೀಜಿ ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಸಂಸ್ಕೃತ ಭಾಷೆಯನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸಂಸ್ಕೃತ ಮಾತಾಡಬಹುದು:
ಲಿಂ.ಸದ್ಗುರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ಅವರ ಶಿಷ್ಯರಾದ ಶ್ರೀಮಠದ ಈಗಿನ ಪೀಠಾಧಿಪತಿ ಸದ್ಗುರು ಶ್ರೀ ದುಂಡೇಶ್ವರ ಸ್ವಾಮೀಜಿ ಸಂಸ್ಕೃತ ಅಧ್ಯಯನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಪ್ರೇರಣೆಯಿಂದ ಶ್ರೀಮಠಕ್ಕೆ ಆಗಮಿಸುವ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಲ್ಲರೂ ಸಂಸ್ಕೃತದಲ್ಲಿಯೇ ಸಂಭಾಷಣೆ ಮಾಡುತ್ತಿದ್ದಾರೆ. 6 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಮಕ್ಕಳು ಸೇರಿ 2,500ಕ್ಕೂ ಹೆಚ್ಚು ಜನರು ಸಂಸ್ಕೃತ ಮಾತನಾಡುವುದರಲ್ಲಿ ಎತ್ತಿದ ಕೈ. ಓದು-ಬರಹ ಬಾರದವರೂ ಸಂಸ್ಕೃತದಲ್ಲಿ ಸಂಭಾಷಣೆ ಮಾಡುತ್ತಿರುವುದು ಮತ್ತು ಸಂಸ್ಕೃತ ಭಾಷೆ ಮೇಲಿನ ಪ್ರೀತಿಯಿಂದ ಗ್ರಾಮಸ್ತರು ‘ನಮ್ಮ ಮನೆಯಲ್ಲಿ ಸಂಸ್ಕೃತ ಮಾತನಾಡಬಹುದು’ ಎನ್ನುವ ಫಲಕ ಅಳವಡಿಸಿಕೊಂಡಿರುವುದು ನಂದೇಶ್ವರ ಗ್ರಾಮದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿದೆ.

ಸಂಸ್ಕೃತ ಕಲಿಯಲು ಗುರು ಪ್ರೇರಣೆ:
‘ಮಗು ಕಾಶಿಗೆ ಹೋಗಿ ಸಂಸ್ಕೃತ ಕಲಿಯುವುದು ಬೇಡ. ನೀನು ಇರುವ ಸ್ಥಳವೇ ಮುಂದೊಂದು ದಿನ ಸಂಸ್ಕೃತ ಶಿಕ್ಷಣ ಕಲಿಸುವ ಕಾಶಿಯಾಗುತ್ತದೆ’ ಈಗಿನ ಶ್ರೀಮಠದ ಪೀಠಾಧಿಪತಿ ಶ್ರೀ ದುಂಡೇಶ್ವರ ಸ್ವಾಮೀಜಿಗೆ ಅಂದಿನ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಸಲಹೆ ನೀಡಿದ್ದರು. ಅಂದಿನಿಂದ ಸ್ವಯಂ ಪ್ರೇರಿತರಾಗಿ ಸಂಸ್ಕೃತ ಕಲಿಯಲು ಪ್ರಾರಂಭಿಸಿದ ಶ್ರೀದುಂಡೇಶ್ವರ ಸ್ವಾಮೀಜಿ, ಸಂಸ್ಕೃತ ಭಾಷೆ ಕಲಿತು ವೇದ-ಉಪನಿಷತ್ತುಗಳನ್ನೂ ಅಧ್ಯಯನ ಮಾಡಿ ಇಂದು ಇಡೀ ಗ್ರಾಮವನ್ನೇ ಸಂಸ್ಕೃತಮಯ ಮಾಡಿದ್ದಾರೆ.

ಐದು ಪಾಠಶಾಲೆ:
ಶ್ರೀಮಠದಿಂದ ನಂದೇಶ್ವರ, ಮಧುರಖಂಡಿ, ಹನ್ನೂರು, ಸತ್ತಿ ಹಾಗೂ ಹಿಪ್ಪರಗಿ ಗ್ರಾಮಗಳಲ್ಲಿ ಸಂಸ್ಕೃತ, ವೇದ, ಸಂಗೀತ ಕಲಿಸುವ ಪಾಠಶಾಲೆ ಪ್ರಾರಂಭಿಸಲಾಗಿದೆ. ನಂದೇಶ್ವರ ಗ್ರಾಮದ ಸಂಸ್ಕೃತ ಪಾಠಶಾಲೆಯಲ್ಲಿ 300ಕ್ಕೂ ಅಧಿಕ ಮಕ್ಕಳು ಅಧ್ಯಯನ ಮಾಡುತ್ತಿದ್ದರೆ, ಎಲ್ಲ ಐದು ಕೇಂದ್ರಗಳಲ್ಲಿ ಒಟ್ಟು 18 ಜನ ಶಿಕ್ಷಕರು ಸೇವೆಯಲ್ಲಿದ್ದಾರೆ. ಉನ್ನತ ಅಧ್ಯಯನ ಮಾಡಲು ‘ಸಂಸ್ಕೃತ ಅಧ್ವೈತ ವೇದಾಂತ ಪದವಿ ಮಹಾವಿದ್ಯಾಲಯ’ವೂ ಇದೇ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಅಲಂಕಾರ ಶಾಸ್ತ್ರ ವಿಷಯದಲ್ಲಿ ಪದವಿ ಕೋರ್ಸ್ ಪ್ರಾರಂಭಿಸುವ ಯೋಜನೆಯೂ ಶ್ರೀಮಠದ್ದಾಗಿದೆ.

ಶಿಬಿರ ಆಯೋಜನೆ:
2010 ರಿಂದ ವರ್ಷದಲ್ಲಿ ಎರಡು ಸಲ ಶಾಲಾ ರಜೆ ಅವಧಿಯಲ್ಲಿ ಉಚಿತ ಊಟ, ವಸತಿಯೊಂದಿಗೆ
ಆಯೋಜಿಸುತ್ತಿರುವ ಸಂಸ್ಕೃತ ಸಂಭಾಷಣಾ ಶಿಬಿರಗಳಲ್ಲಿ ಸ್ಥಳೀಯರ ಜತೆಗೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಜಿಲ್ಲೆ ಒಳಗೊಂಡಂತೆ ಉತ್ತರ ಕರ್ನಾಟಕದಿಂದ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಆಸಕ್ತರು ಪಾಲ್ಗೊಳ್ಳುತ್ತಿದ್ದಾರೆ. 2016ರಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ‘ಸಂಸ್ಕೃತ ಭಾಷಾ ಸಮ್ಮೇಳನ’ ಉತ್ತರ ಕರ್ನಾಟಕದಲ್ಲಿ ಜರುಗಿದ ಪ್ರಥಮ ಸಮ್ಮೇಳನವಾಗಿ ದಾಖಲೆಯಾಗಿದೆ. ಅಲ್ಲದೆ, ಶ್ರೀಮಠದ ಪೂಜ್ಯರು ‘ಶ್ರೀ ಸದ್ಗುರು ಸಿದ್ದಲಿಂಗೇಶ್ವರ ವಿಜಯಲೀಲಾ ಕಲ್ಪದೃಮ’ ಎಂಬ 12 ಗ್ರಂಥಗಳನ್ನು ರಚನೆ ಮಾಡಿದ್ದು, ಅವು ಸಂಸ್ಕೃತ ಸೇರಿ ಐದಕ್ಕೂ ಹೆಚ್ಚು ಭಾಷೆಗೆ ಅನುವಾದಗೊಂಡಿವೆ. ಇಂತಹ ಖ್ಯಾತಿ ಹೊಂದಿರುವ ನಂದೇಶ್ವರ ಗ್ರಾಮವನ್ನು ಸರ್ಕಾರ ಹಾಗೂ ಸಂಸ್ಕೃತ ವಿಶ್ವವಿದ್ಯಾಲಯ ‘ಸಂಸ್ಕೃತ ಗ್ರಾಮ’ ಎಂದು ಘೋಷಿಸಿ ಅಗತ್ಯ ಸೌಲಭ್ಯ ಒದಗಿಸಬೇಕೆನ್ನುವುದು ಗ್ರಾಮಸ್ಥರ ಆಗ್ರಹ.

ಸಂಸ್ಕೃತ ದೇವಭಾಷೆಯಾಗಿದ್ದು, ಭಾರತೀಯ ಸಂಸ್ಕೃತಿಯ ಪ್ರತೀಕ. ಪ್ರತಿಯೊಬ್ಬರು ಸಂಸ್ಕೃತ ಭಾಷೆ ಕಲಿತು ಉಳಿಸಿ, ಬೆಳೆಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ನಿತ್ಯ ಅಧ್ಯಯನದಿಂದ ಸಂಸ್ಕೃತ ಭಾಷೆಯನ್ನು ಸುಲಭವಾಗಿ ಕಲಿಯಬಹುದು.

ಸದ್ಗುರು ಶ್ರೀ ದುಂಡೇಶ್ವರ ಸ್ವಾಮೀಜಿ, ಮಧುರಖಂಡಿ ಕಮರಿಮಠ, ನಂದೇಶ್ವರ

ಶ್ರೀದುಂಡೇಶ್ವರ ಸ್ವಾಮೀಜಿ ಅವರ ಪರಿಶ್ರಮ ಮತ್ತು ಪ್ರೇರಣೆಯಿಂದ ಗ್ರಾಮಸ್ಥರು ಸುಲಭವಾಗಿ ಸಂಸ್ಕೃತ ಮಾತನಾಡುತ್ತಿದ್ದಾರೆ.

ಪ್ರಭು ಪೂಜಾರಿ, ಆಧ್ಯಾತ್ಮಿಕ ಚಿಂತಕರು, ನಂದೇಶ್ವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net