ಎಸ್​ಜೆಎಂವಿಎಸ್​ದಿಂದ ಬಿಕಾಂ ಎಲ್​ಎಲ್​ಬಿ ಆರಂಭ

New PM New
Published on

ಹುಬ್ಬಳ್ಳಿ : ಶ್ರೀ ಜಗದ್ಗುರು ಮೂರುಸಾವಿರ ಮಠ ವಿದ್ಯಾವರ್ಧಕ ಸಂಘ (ಎಸ್​ಜೆಎಂವಿಎಸ್)ದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿಕಾಂ ಎಲ್​ಎಲ್​ಬಿ ಐದು ವರ್ಷದ ಕೋರ್ಸ್ ಪ್ರಾರಂಭಿಸಲಾಗುತ್ತಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀಮಠದ ಉನ್ನತ ಸಮಿತಿ ಸಂಚಾಲಕ ಮೋಹನ ಲಿಂಬಿಕಾಯಿ, ಪಿಯುಸಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 45ರಷ್ಟು ಅಂಕ ಪಡೆದವರು ಪ್ರವೇಶ ಪಡೆಯಲು ಅರ್ಹರು ಎಂದರು.

ಮೂರುಸಾವಿರ ಮಠ ಆವರಣದ ಶಿಕ್ಷಣ ಸಮುಚ್ಛಯದ ಜ್ಞಾನ ಮಂದಿರದ ನೆಲ ಮಹಡಿಯ ಭಾಗವನ್ನು ಕಾನೂನು ಮಹಾವಿದ್ಯಾಲಯಕ್ಕಾಗಿ ತಾತ್ಪೂರ್ತಿಕವಾಗಿ ಮೀಸಲಿಡಲಾಗಿದೆ. ಆ ಜಾಗದಲ್ಲಿರುವ ಐಟಿಐ ತರಗತಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.

ಹುಬ್ಬಳ್ಳಿ ಕುಸುಗಲ್ ರಸ್ತೆಯಲ್ಲಿರುವ ಶ್ರೀಮಠದ 3.20 ಎಕರೆ ಜಾಗದಲ್ಲಿ ಕಾನೂನು ಮಹಾವಿದ್ಯಾಲಯಕ್ಕಾಗಿ ಎರಡು ವರ್ಷಗಳಲ್ಲಿ ಹೊಸ ಕಟ್ಟಡ ನಿರ್ವಿುಸಲಾಗುವುದು. ಕಾನೂನು ವಿಶ್ವವಿದ್ಯಾಲಯದ ನಿಯಮದ ಪ್ರಕಾರ ವಿದ್ಯಾರ್ಥಿಗಳಿಂದ ಶುಲ್ಕ ಆಕರಿಸಲಾಗುವುದು. ಯಾವುದೇ ಕಾರಣಕ್ಕೂ ಡೋನೆಷನ್ ಪಡೆಯುವುದಿಲ್ಲ ಎಂದು ತಿಳಿಸಿದರು.

ಎರಡು ತರಗತಿ ಕೊಠಡಿಗಳು, ಪ್ರಾಚಾರ್ಯರ ಚೇಂಬರ್, ಡಿಜಿಟಲ್ ಲೈಬ್ರರಿ ಇದ್ದು, ಮೂವರು ಶಿಕ್ಷಕರಿದ್ದಾರೆ. ಹಿರಿಯ ವಕೀಲರನ್ನು ಸಹ ಅತಿಥಿ ಪ್ರಾಧ್ಯಾಪಕರನ್ನಾಗಿ ಕರೆಯಲಾಗುವುದು ಎಂದು ಹೇಳಿದರು.

60 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು. ಇದೇ ಜುಲೈ 1 ರಿಂದ ಪ್ರವೇಶ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಆಗಷ್ಟ್ 1 ರಿಂದ ತರಗತಿಗಳು ಪ್ರಾರಂಭಗೊಳ್ಳಲಿವೆ ಎಂದರು.

ಕೃತಕ ಬುದ್ಧಿಮತ್ತೆ, ಸಂವನಹ ಕಲೆ ಸೇರಿದಂತೆ ಇನ್ನಿತರ ಕೌಶಲ್ಯಗಳನ್ನು ಸಹ ಕಲಿಸಲಾಗುವುದು. ಪ್ರತಿ ವಾರ ವಿದ್ಯಾರ್ಥಿಗಳಿಗೆ ನ್ಯಾಯಾಲಯಕ್ಕೆ ಹೋಗಿ, ವಾದ-ವಿವಾದ ಆಲಿಸುವ ಮೂಲಕ ಪ್ರಾ ್ಯ್ಟಲ್ ಅನುಭವ ನೀಡಲಾಗುವುದು. ಅಣುಕು ಕಾರ್ಯಾಚರಣೆಯನ್ನೂ ನಡೆಸಲಾಗುವುದು ಎಂದು ವಿವರಿಸಿದರು.

ಈ ಕಾನೂನು ಮಹಾವಿದ್ಯಾಲಯಕ್ಕೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ಕೇಂದ್ರ ವಕೀಲರ ಪರಿಷತ್ತಿನಿಂದ ಮಾನ್ಯತೆ ದೊರೆತಿದೆ. ಈಗಾಗಲೇ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಬಿಎ ಎಲ್​ಎಲ್​ಬಿ ಪ್ರಾರಂಭಿಸುವ ಯೋಜನೆಯೂ ಇದೆ ಎಂದು ತಿಳಿಸಿದರು.

ಸಂಘದ ಗೌರವ ಕಾರ್ಯಾಧ್ಯಕ್ಷ ಅರವಿಂದ ಕುಬಸದ, ನಿರ್ದೇಶಕರಾದ ಶಶಿ ಸಾಲಿ, ವೀರಣ್ಣ ಕಲ್ಲೂರ, ಲಿಂಗರಾಜ ಇಂಗಳಳ್ಳಿ, ಪ್ರಾಚಾರ್ಯರಾದ ಸವಿತಾ ದೇಶಪಾಂಡೆ, ಸದಾನಂದ ಡಂಗನವರ, ಚನ್ನಬಸಪ್ಪ ಧಾರವಾಡಶೆಟ್ರ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net