

ಹುಬ್ಬಳ್ಳಿ : ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಇತ್ತೀಚೆಗೆ ಆಯೋಜಿಸಿದ್ದ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವದಲ್ಲಿ ಹುಬ್ಬಳ್ಳಿಯ ಎಸ್ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಲಭಿಸಿದೆ.
ಎಸ್ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಿಂದ ಒಟ್ಟು 36 ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಆಯೋಜಿಸಿದ್ದ 26 ಸ್ಪರ್ಧೆಗಳಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು 12 ಸ್ಪರ್ಧೆಗಳಲ್ಲಿ ವಿಜೇತರಾಗಿ, ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.
ಈ ಮಹಾವಿದ್ಯಾಲಯವು ಸತತ 8ನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಪಾತ್ರವಾಗಿದೆ. ಸಂಗೀತದಲ್ಲಿ ರನ್ನರ್ ಅಪ್ ಪ್ರಶಸ್ತಿ ಗಳಿಸಿದ್ದಲ್ಲದೇ, ನಾಟಕ ಹಾಗೂ ಲಲಿತಕಲೆ ವಿಭಾಗದಲ್ಲಿಯೂ ಪ್ರಶಸ್ತಿ ಗಳಿಸಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಶ್ರೀ ಜಗದ್ಗುರು ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ಪ್ರಾಚಾರ್ಯರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
ಶಾಸ್ತ್ರೀಯ ಸಂಗೀತ ಗಾಯನ (ಸೋಲೊ)ದಲ್ಲಿ ಅಶ್ವಿನಿ ಬುಡ್ನಿ (ದ್ವಿತೀಯ), ಸುಗಮ ಸಂಗೀತ (ಸೋಲೊ)ದಲ್ಲಿ ಮೇಘಾ ಕೊಟಬಾಳ (ದ್ವಿತೀಯ), ಶಾಸ್ತ್ರೀಯ ಸಂಗೀತ ವಾದ್ಯ (ಬಾನ್ಸುರಿ ಹಾಗೂ ತಬಲಾ)ದಲ್ಲಿ ಚಿತ್ರಲೇಖಾ ನಾಯಕ ಪ್ರಥಮ, ಪಾಶ್ಚಾತ್ಯ ಸಂಗೀತ ವಾದ್ಯ (ಸೋಲೊ)ದಲ್ಲಿ ಕೆ. ಹೆಬ್ಜಿ ಬ್ಯೂಲಾ (ಪ್ರಥಮ), ಜಾನಪದ ವಾದ್ಯಮೇಳದಲ್ಲಿ ಭಾರ್ಗವಿ ಕುಲಕರ್ಣಿ ಹಾಗೂ ಸಂಗಡಿಗರು (ಪ್ರಥಮ), ಸಮೂಹ ಗಾಯನ (ಭಾರತೀಯ)ದಲ್ಲಿ ಗಾಯತ್ರಿ ಹಾಗೂ ಸಂಗಡಿಗರು (ದ್ವಿತೀಯ), ಸಮೂಹ ಗಾಯನ (ಪಾಶ್ಚಾತ್ಯ)ದಲ್ಲಿ ಭಾರ್ಗವಿ ಕುಲಕರ್ಣಿ ಹಾಗೂ ಸಂಗಡಿಗರು (ಪ್ರಥಮ), ನಾಟಕ ವಿಭಾಗದ ಪ್ರಹಸನದಲ್ಲಿ ಸೌಂದರ್ಯ ಹಾಗೂ ಸಂಗಡಿಗರು (ತೃತೀಯ), ಮಿಮಿಕ್ರಿಯಲ್ಲಿ ಚಿನ್ನಿಧಿ ಮಟ್ಟಿ (ಪ್ರಥಮ), ಏಕಾಂಕ ನಾಟಕದಲ್ಲಿ ಸಂಧ್ಯಾರಾಣಿ ಹಾಗೂ ಸಂಗಡಿಗರು (ತೃತೀಯ), ಲಲಿತ ಕಲೆ ವಿಭಾಗದ ಕ್ಲೆ ಮಾಡಲಿಂಗ್ನಲ್ಲಿ ಚೈತ್ರಾ ಕುಸುಗಲ್ (ತೃತೀಯ) ಉತ್ತಮ ಸಾಧನೆ ತೋರಿದ್ದಾರೆ.