ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶ ಶತಮಾನೋತ್ಸವ ಕಾರ್ಯಕ್ರಮ; ಸಿದ್ದತೆ ಪರಿಶೀಲನೆ

IMG-20241224-WA0003.jpg
Published on

ಬೆಳಗಾವಿ: ನಗರದಲ್ಲಿ ಡಿ. 26, 27 ರಂದು ನಗರದ ಸಿ.ಪಿ.ಎಡ್ ಮೈದಾನದಲ್ಲಿ ನಡೆಯಲಿರುವ ಗಾಂಧಿ ಭಾರತ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್‌, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಪೂರ್ವಸಿದ್ದತೆಗಳನ್ನು ಪರಿಶೀಲಿಸಿದರು.

ನಂತರ ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು, 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಟಿಳಕವಾಡಿಯ ಕಾಂಗ್ರೆಸ್‌ ಅಧಿವೇಶನ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೀರಸೌಧದ ಉದ್ಯಾನದಲ್ಲೇ ಡಿ. 26ರಂದು ಸಿಡಬ್ಲೂಸಿ ಸಭೆ ನಡೆಯಲಿದ್ದು, ಕಾಂಗ್ರೆಸ್ ಐಡಿಯಾಲಜಿ ಕುರಿತು ಚರ್ಚೆ ನಡೆಸಲಿದ್ದು, ಭರದಿಂದ ನಡೆದ ಸಿದ್ದತೆಗಳನ್ನು ವೀಕ್ಷಿಸಿ, ಸಂಘಟಕರಿಗೆ ಸಲಹೆ, ಸೂಚನೆಗಳನ್ನು ನೀಡಿದರು.

ವೀರಸೌಧದಲ್ಲಿದ್ದ ಗಾಂಧೀಜಿ ಅವರ ಬಾಲ್ಯ, ಶಿಕ್ಷಣ, ಕುಟುಂಬದ ಜತೆಗೆ, ಬೆಳಗಾವಿಯ ಅಧಿವೇಶನದಲ್ಲಿ ಅವರು ಪಾಲ್ಗೊಂಡಿದ್ದ ಅಪರೂಪದ ಕಪ್ಪು–ಬಿಳುಪಿನ 50ಕ್ಕೂ ಹೆಚ್ಚು ಚಿತ್ರಗಳು ರಣದೀಪ್ ಸಿಂಗ್ ಸುರ್ಜೆವಾಲಾ ವೀಕ್ಷಿಸಿದರು.

ಇನ್ನು ಬೆಳಗಾವಿಯಲ್ಲಿ ಎರಡು ದಿನ ಕಾಲ ನಡೆಯುವ ಗಾಂಧಿ ಭಾರತ ಕಾರ್ಯಕ್ರಮ ಸರ್ವ ಸಿದ್ದತೆಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರೊಂದಿಗೆ ಚರ್ಚಿಸಿದರು.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್‌ ಮಾಧ್ಯಮದವರೊಂದಿಗೆ ಮಾತನಾಡಿ, ಡಿ. 26, 27 ರಂದು ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಭಾರತ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್‌ ಕಾರ್ಯಕರ್ತರು ಪಾಲ್ಗೊಳ್ಳಬೇಕು. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ಸುವರ್ಣ ಸೌಧದ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ವಿರೋಧ ಪಕ್ಷಗಳ ನಾಯಕರು, ಸಂಸದರು, ಉಭಯ ಸದನಗಳ ಸಭಾಧ್ಯಕ್ಷರು ಹಾಗೂ ಸಭಾಪತಿಗಳು, ಎಲ್ಲಾ ಪಕ್ಷಗಳ ಶಾಸಕರು ಹಾಗೂ ಪರಿಷತ್ ಸದಸ್ಯರು ಸೇರಿ ಎಲ್ಲಾ ಪಕ್ಷಗಳಿಗೂ ಆಹ್ವಾನ ನೀಡಲಾಗುವುದು. ಇದು ಸಂಪೂರ್ಣ ಸರ್ಕಾರಿ ಕಾರ್ಯಕ್ರಮ. ಭದ್ರತಾ ದೃಷ್ಟಿಯಿಂದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಆಹ್ವಾನ ಇರುವುದಿಲ್ಲ. ಬೆಳಗಾವಿಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಇತರೆ ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಲಾಗುವುದು ಎಂದು ತಿಳಿಸಿದರು.

ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಪ್ರಮುಖ 500ರಿಂದ 600 ಜನ ಕಾಂಗ್ರೆಸ್ ನಾಯಕರು ಮಾತ್ರ ಆಗಮಿಸುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಎಲ್ಲಾ ರಾಜ್ಯಗಳ ಶಾಸಕಾಂಗ ಪಕ್ಷದ ನಾಯಕರು, ಸಂಸದರು ಆಗಮಿಸಲಿದ್ದಾರೆ. ಇವರೆಲ್ಲರೂ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದು, ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮಿತಿಯ ಸದಸ್ಯರು ಮಾತ್ರ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಎಐಸಿಸಿ ಕಾರ್ಯದರ್ಶಿ ಅಂಜಲಿ ನಿಂಬಾಳಕರ್‌, ಶಾಸಕರಾದ ಗಣೇಶ ಹುಕ್ಕೇರಿ, ರಾಜು ಸೇಠ್‌, ಯೂಥ್ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್, ಬೆಳಗಾವಿ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಸುನೀಲ ಹಣಮನ್ನವರ್‌ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net