

ಮಂಡ್ಯ: ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದಲ್ಲಿ ಭ್ರಷ್ಟಾಚಾರ ತುಂಬಿಕೊಂಡಿರುವುದರಿಂದಲೇ ಚುನಾವಣೆಯಲ್ಲಿಯೂ ಅಕ್ರಮ ನಡೆಯುತ್ತಿವೆ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ವಿಷಾದಿಸಿದರು.
ನಗರದ ಗಾಂಧಿಭವನದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಆರನೇ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಚುನಾವಣಾ ಸುಧಾರಣೆ ಕುರಿತು ದಿಕ್ಸೂಚಿ ಭಾಷಣ ಮಾಡಿದ ಅವರು, ದೇಶದ ಪ್ರಜಾಪ್ರಭುತ್ವವನ್ನು ಸ್ವಚ್ಛಗೊಳಿಸಬೇಕಾದರೆ ಮೊದಲು ಜನ ಜಾಗೃತರಾಗಬೇಕು. ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಅವಕಾಶಗಳನ್ನು ಸಂವಿಧಾನ ಕೊಟ್ಟಿದೆ. ಸಂವಿಧಾನವು ಜನಸಾಮಾನ್ಯರನ್ನು ಮಾಲೀಕರನ್ನಾಗಿ ಮಾಡಿದೆ. ಸರ್ಕಾರಿ ನೌಕರರನ್ನು ನಮ್ಮ ಸೇವಕರನ್ನಾಗಿಸಿ ಅಧಿಕಾರ ಕೊಟ್ಟಿದೆ ಎಂದರು.
ಲೋಕಸಭೆಯಲ್ಲಿ ಶೇ.20ರಷ್ಟಿದ್ದ ಕ್ರಿಮಿನಲ್‌ಗಳ ಸಂಖ್ಯೆ ಈಗ ಶೇ.40ಕ್ಕೆ ಏರಿಕೆಯಾಗಿದೆ. ಪ್ರಜಾಪ್ರಭುತ್ವದ ಮಾಲೀಕರಾದ ಮತದಾರರು ಕುಂಭಕರ್ಣ ನಿದ್ರೆಗೆ ಜಾರಿದ್ದಾಗ ರಾಜಕಾರಣಿಗಳು ಇದರ ಲಾಭ ಪಡೆದು ಮಾಡಬಾರದನ್ನು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನಾಗರಿಕರು ಸೃಜನಶೀಲರಾಗಿ ಮುಂದುವರೆಯುವ ಮೂಲಕ ಸಾರ್ವಜನಿಕ ಜೀವನದಲ್ಲಿ ನೈತಿಕತೆ ಮರು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.
ವಿಚಾರ ಸಂಕಿರಣ ಉದ್ಘಾಟಿಸಿದ ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ಪ್ರಸ್ತುತದಲ್ಲಿನ ಚುನಾವಣೆ ವ್ಯವಸ್ಥೆ ಸರಿಪಡಿಸಿದರೆ ಪ್ರಜಾಪ್ರಭುತ್ವ ಮತ್ತೆ ಸರಿದಾರಿಗೆ ಬರಲು ಸಾಧ್ಯವಿದೆ. ನಾನು 1984 ರಲ್ಲಿ ಮಳವಳ್ಳಿಯಲ್ಲಿ ಚುನಾವಣೆಗೆ ನಿಂತಾಗ ಜನ ನಮ್ಮೂರಿಗೆ ಕುಡಿಯಲು ನೀರು ಕೊಡಿ, ರಸ್ತೆ ಮಾಡಿಕೊಡಿ ಎಂದು ಕೇಳುತ್ತಿದ್ದರು. ಆಗ ನಾನು ಅವರ ಅಗತ್ಯತೆಗೆ ಸ್ಪಂದಿಸಿದ ಪರಿಣಾಮ ಮತ್ತೆ ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದರು. 20 ಸಾವಿರ ರೂ ವೆಚ್ಚ ಮಾಡಿ ಶಾಸಕನಾದ ನಾನು, ಇವತ್ತು 10 ಕೋಟಿ ರೂ ಖರ್ಚು ಮಾಡುವ ಎಂಎಲ್ಎಗಳನ್ನು ಕಾಣುತ್ತಿದ್ದೇನೆ ಎಂದು ಬೇಸರ ವ್ತಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಮಾತನಾಡಿ, ಭ್ರಷ್ಟಾಚಾರ ನಡೆಯುತ್ತಿರುವುದನ್ನು ಕಂಡು ಸುಮ್ಮಿನಿರುವ ಮನಸ್ಸುಗಳು ಭವಿಷ್ಯದ ಕಂಠಕಗಳು. ಪ್ರತಿ ರಾಜಕೀಯ ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವ ಇರಬೇಕು. ಆಂತರಿಕ ಚುನಾವಣೆಯನ್ನು ಚುನಾವಣಾ ಆಯೋಗವೇ ನಡೆಸಬೇಕು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಕೋಳಿ, ಹೆಂಡ, ಹಣ ಹಂಚಲು ಬರುವವರಿಗೆ ಪ್ರತಿ ಕುಟುಂಬದ ಮಹಿಳೆಯರು ಪೊರಕೆಯಲ್ಲಿ ಹೊಡೆದಿದ್ದರೆ ಇವತ್ತು ಭ್ರಷ್ಟಾಚಾರ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದು ಹೇಳಿದರು.
ಕೆಆರ್‌ಎಸ್ ಪಕ್ಷದ ದೀಪಕ್, ಅರುಣ್‌ಕುಮಾರ್ ಇತರರಿದ್ದರು.