ಅಶೋಕಪುರಂ ರೈಲು ನಿಲ್ದಾಣದಿಂದ ಆರು ರೈಲುಗಳು ಸಂಚಾರ

mysore
Published on

ಮೈಸೂರು: ನವೀಕೃತ ಅಶೋಕಪುರಂ ರೈಲು ನಿಲ್ದಾಣದಿಂದ ಆರು ರೈಲುಗಳು ಸಂಚಾರವನ್ನು ಆರಂಭಿಸಲಿವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಅಶೋಕಪುರಂ ರೈಲು ನಿಲ್ದಾಣದಲ್ಲಿ ಉನ್ನತೀಕರಿಸಿದ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿ, ಬೆಂಗಳೂರು-ಮೈಸೂರು ನಡುವೆ ಸಂಚರಿಸುವ 4 ಮೆಮೋ ರೈಲುಗಳು, ಮಾಲ್ಗುಡಿ ರೈಲು, ಚೆನ್ನೈ-ಮೈಸೂರು ನಡುವಿನ ಕಾವೇರಿ ಎಕ್ಸ್‌ಪ್ರೆಸ್ ರೈಲು ಈ ನಿಲ್ದಾಣದಿಂದ ಹೊರಡಲಿವೆ.

ಇಷ್ಟು ದಿನ ಇವುಗಳು ಮೈಸೂರು ನಿಲ್ದಾಣದಿಂದ ಸೇವೆ ನೀಡುತ್ತಿದ್ದು, ಈ ರೈಲುಗಳ ವಿಸ್ತರಣೆ ಕುರಿತು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದಕ್ಕೆ ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದರು.


35.50 ಕೋಟಿ ರೂ. ವೆಚ್ಚದಲ್ಲಿ ಅಶೋಕಪುರಂ ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದು ಮೈಸೂರಿನ 2ನೇ ರೈಲು ನಿಲ್ದಾಣವಾಗಿ ಪರಿವರ್ತನೆಗೊಂಡಿದೆ. ಇದು ಈ ಮೊದಲು ರೈಲ್ವೆಯ ಗುಜರಿ ಅಂಗಡಿಯಾಗಿತ್ತು. ಆದರೀಗ ಈ ನಿಲ್ದಾಣವನ್ನು ಅಚ್ಚುಕಟ್ಟಾಗಿ ಮರುರೂಪಿಸಲಾಗಿದೆ ಎಂದರು.


ಅಶೋಕಪುರಂ ನಿಲ್ದಾಣವು ಮರುಅಭಿವೃದ್ಧಿಯ ನಂತರ ತನ್ನ ಮೂಲಸೌಕರ್ಯವನ್ನು ವಿಸ್ತರಿಸಿಕೊಂಡಿದ್ದು, ಈಗ 2 ಚಾಲನೆಯಲ್ಲಿರುವ ಹಳಿಮಾರ್ಗಗಳು, 5 ಪ್ಲಾಟ್‌ಫಾರ್ಮ್‌ಗಳು ಮತ್ತು 2 ಸ್ಟೇಬ್ಲಿಂಗ್ ಲೈನ್‌ಗಳನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಅಮೃತ ಭಾರತ ನಿಲ್ದಾಣ ಯೋಜನೆಯಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲು ರೈಲು ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಇದಕ್ಕೆ ಒಪ್ಪಿಗೆ ದೊರೆತರಿಗೆ 30 ರಿಂದ 40 ಕೋಟಿ ರೂ. ಅನುದಾನ ದೊರೆಯುತ್ತದೆ ಎಂದರು.


ಚಾಮರಾಜನಗರ-ತಿರುಪತಿ ನಡುವೆ ಸಂಚರಿಸುವ ರೈಲು ಅಶೋಕಪುರಂ ನಿಲ್ದಾಣದಲ್ಲಿ ನಿಲುಗಡೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. 356 ಕೋಟಿ ರೂ. ವೆಚ್ಚದಲ್ಲಿ 65 ಎಕರೆ ಜಾಗದಲ್ಲಿ ಮೈಸೂರು ರೈಲು ನಿಲ್ದಾಣದ ಮೇಲ್ದರ್ಜೆ ಮತ್ತು ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಹೆಚ್ಚುವರಿ ಫ್ಲಾಟ್‌ಫಾರ್ಮ್‌ಗಳು, ಸ್ಟೇಬ್ಲಿಂಗ್ ಲೈನ್, ಪಿಟ್‌ಲೈನ್ ದೊರೆಯಲಿದೆ ಎಂದು ತಿಳಿಸಿದರು.


ಮೈಸೂರಿನ ಬಂಡಿಪಾಳ್ಯದಿಂದ ನಂಜನಗೂಡುವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಆರು ಪಥ ಮತ್ತು ಸರ್ವೀಸ್ ರಸ್ತೆಯೊಂದಿಗೆ ಅಭಿವೃದ್ಧಿಪಡಿಸಲಾಗುವುದು. ವಿದ್ಯಾರಣ್ಯಪುರಂ ಸೂಯೇಜ್ ಫಾರ್ಮ್‌ನಲ್ಲಿರುವ ಕಸದ ರಾಶಿಯನ್ನು ಸದ್ಯದಲ್ಲೇ ತೆರವುಗೊಳಿಸಲಾಗುವುದು. ಮುಂದಿನ ವರ್ಷದೊಳಗೆ ಇಲ್ಲಿ ಒಂದು ಹಿಡಿ ತ್ಯಾಜ್ಯವೂ ಇರುವುದಿಲ್ಲ ಎಂದು ಆಶ್ವಾಸನೆ ನೀಡಿದರು.


ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಅಶೋಕಪುರಂ ರೈಲ್ವೆ ನಿಲ್ದಾಣದಿಂದ ಮೈಸೂರು ರೈಲು ನಿಲ್ದಾಣದ ಮೇಲೆ ಒತ್ತಡ ಕಡಿಮೆಯಾಗಿದೆ. ಇಲ್ಲಿಯಿಂದಲೇ ಬೆಂಗಳೂರಿಗೆ ತೆರಳುವವರೂ ಅನುಕೂಲವಾಗಿದೆ. ರೈಲು ಪ್ರಯಾಣಿಕರಿಗಾಗಿ ಇಲ್ಲಿ ಬಸ್ ಸೌಲಭ್ಯ ಕಲ್ಪಿಸಬೇಕಾಗಿದೆ ಎಂದರು.


ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್, ಹಿರಿಯ ರೈಲ್ವೆ ಅಧಿಕಾರಿಗಳಾದ ವಿನಾಯಕ್ ನಾಯ್ಕ, ವಿಜಯಾ, ರವಿಚಂದ್ರ, ಮಾಜಿ ಮೇಯರ್ ಶಿವಕುಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net