ಕಡೂರು: ತಾಲೂಕಿನ ಕುಪ್ಪಾಳು ಮುರಾರ್ಜಿ ವಸತಿ ಶಾಲೆಯಲ್ಲಿ ಶನಿವಾರ 7ನೇ ತರಗತಿ ವಿದ್ಯಾರ್ಥಿ ನೇರಳೆ ಹಣ್ಣು ಕೀಳಲು ಮರ ಹತ್ತಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದ ಮೇರೆಗೆ ಪ್ರಭಾರ ಪ್ರಾಚಾರ್ಯ ಹಾಗೂ ನಿಲಯಪಾಲಕಿಯನ್ನು ಅಮಾನತುಗೊಳಿಸಲಾಗಿದೆ.
ಪ್ರಕರಣ ಸಂಬಂದ ಮೊದಲು ಪ್ರಭಾರ ಪ್ರಾಚಾರ್ಯ, ನಿಲಯಪಾಲಕಿ ಸೇರಿ 8 ಬೋಧಕರು ಒಳಗೊಂಡ ಸಿಬ್ಬಂದಿಯನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಪಿ.ಪ್ರವೀಣ್ ಬಾಗೇವಾಡಿ ಅಮಾನತುಗೊಳಿಸಿದ್ದರು. ವಿದ್ಯಾರ್ಥಿಗಳ ಸುರಕ್ಷತೆ ಜವಾಬ್ದಾರಿ ನಿರ್ವಹಣೆಯಲ್ಲಿ ಲೋಪ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿದ್ದರು. ತೆರವಾದ ಪ್ರಾಚಾರ್ಯ ಹುದ್ದೆಗೆ ಕೆ.ಪಿ.ಶೈಲಾ ಅವರನ್ನು ನೇಮಿಸಿದ್ದರು. ಆದರೆ ಭಾನುವಾರ ಆದೇಶ ಮಾರ್ಪಡಿಸಿಕೊಂಡು ಶೈಕ್ಷಣಿಕ ಹಿತದೃಷ್ಟಿಯಿಂದ ಬೋಧಕವರ್ಗದ 6 ಜನರ ಅಮಾನತು ಆದೇಶ ಹಿಂಪಡೆದು, ಪ್ರಭಾರ ಪ್ರಾಚಾರ್ಯ ಹಾಗೂ ನಿಲಯಪಾಲಕಿಯ ಅಮಾನತು ಆದೇಶ ಯಥಾಸ್ಥಿತಿ ಮುಂದುವರಿಸಿದ್ದಾರೆ.