ಕುಂಬಳೆ ಠಾಣೆ ಆರು ಪೊಲೀಸರ ಅಮಾನತು

New Project (38)
Published on

ಕಾಸರಗೋಡು: ಅನಧಿಕೃತ ಮರಳು ದಂಧೆಕೋರರ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂಬ ಆರೋಪದಲ್ಲಿ ಕುಂಬಳೆ ಠಾಣೆ ಪೊಲೀಸ್ ವಾಹನ ಚಾಲಕ ಸೇರಿದಂತೆ 6 ಮಂದಿ ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಭಾರತ್ ರೆಡ್ಡಿ ನಿರ್ದೇಶನದ ಮೇರೆಗೆ ಅಮಾನತು ಮಾಡಲಾಗಿದೆ.

ಕುಂಬಳೆ ಠಾಣಾಧಿಕಾರಿ ನೀಡಿದ ವರದಿಯಂತೆ ಜಿಲ್ಲಾ ಪೊಲೀಸ್ ವರಿಷ್ಠರು ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ವಾಹನ ಚಾಲಕ ಕೃಷ್ಣ ಪ್ರಸಾದ್, ಸಿಬ್ಬಂದಿ ಪಿ.ಎಂ.ಅಬ್ದುಲ್ ಸಲಾಂ, ವಿನೋದ್ ಕುಮಾರ್, ಲಿನೀಷ್, ಕೆ.ಅನೂಪ್, ಮನು ಎಂಬುವರು ಅಮಾನತುಗೊಂಡವರು. ಕುಂಬಳೆ ಠಾಣಾ ಪೊಲೀಸರಿಗೆ ಸ್ಥಳೀಯ ಮರಳು ಮಾಫಿಯ ಜತೆ ಸಂಪರ್ಕ ಇರುವ ಬಗ್ಗೆ ಜಿಲ್ಲಾ ಪೊಲೀಸ್ ಇತ್ತೀಚೆಗೆ ದೂರು ಲಭಿಸಿತ್ತು. ಅನಧಿಕೃತ ಮರಳು ದಂಧೆ ವಿರುದ್ಧ ದಾಳಿ ನಡೆಸಿ ಟಿಪ್ಪರ್ ಲಾರಿ ಚಾಲಕನನ್ನು ಕುಂಬಳೆ ಠಾಣೆ ಎಸ್‌ಐ ನೇತೃತ್ವದಲ್ಲಿ ಬಂಧಿಸಲಾಗಿತ್ತು. ಬಳಿಕ ಆತನ ಮೊಬೈಲ್ ಪರಿಶೀಲಿಸಿದಾಗ ಪೊಲೀಸರ ಜತೆಗಿನ ಸಂಪರ್ಕ, ಸಂಭಾಷಣೆ ಬಯಲಾಗಿತ್ತು. ಮರಳು ಸಾಗಾಟಗಾರರಿಗೆ ಠಾಣೆ ಪೊಲೀಸರ ಕಾರ್ಯಾಚರಣೆ ಬಗ್ಗೆ ಪೊಲೀಸರೇ ಸುಳಿವು ಒದಗಿಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಲಂಚ ಪಡೆಯುತ್ತಿದ್ದರೆಂಬ ಮಾಹಿತಿ ಲಭಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net