

ತುಮಕೂರು: ಕರೊನಾ ಆರ್ಭಟ ಮುಂದುವರಿದಿದ್ದು, ಒಂದೇದಿನ ತುಮಕೂರು ನಗರದ 6 ಮಂದಿ ಬಲಿಯಾಗಿದ್ದಾರೆ. ಗುರುವಾರ 222 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈವರೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6662ಕ್ಕೇರಿಕೆಯಾಗಿದೆ. ತುಮಕೂರು ನಗರದ 6 ಮಂದಿಯನ್ನು ಕರೊನಾ ಬಲಿಪಡೆದಿದೆ.
ಜ್ವರ, ಕೆಮ್ಮು, ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಬಟವಾಡಿಯ 58 ವರ್ಷದ ವ್ಯಕ್ತಿ, ಎಸ್‌ಎಸ್ ಪುರಂನ 83 ವರ್ಷದ ವೃದ್ಧ ಹಾಗೂ ಕೆ.ಆರ್.ಬಡಾವಣೆಯ 74 ವರ್ಷದ ವೃದ್ಧ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಶ್ರೀರಾಮನಗರದ 61 ವರ್ಷದ ವೃದ್ಧೆ ಹಾಗೂ ಗೋಕುಲಬಡಾವಣೆಯ 69 ವರ್ಷದ ವೃದ್ಧ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಲಿಂಗಾಪುರದ 58 ವರ್ಷದ ವ್ಯಕ್ತಿ ಬೆಂಗಳೂರಿನ ಶೇಖರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಧುಮೇಹ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸಿದ್ದಾರ್ಥನಗರದ 72 ವರ್ಷದ ವೃದ್ಧೆ ಸಾವನ್ನಪ್ಪಿದ್ದು, ಅವರಿಗೂ ಸೋಂಕು ತಗುಲಿರುವುದು ಕೋವಿಡ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ವೃದ್ಧೆಯ ಸಾವನ್ನು ಅನ್ಯಕಾರಣದಿಂದ ಮೃತಪಟ್ಟವರೆಂದು ಪರಿಗಣಿಸಲಾಗಿದೆ.
222 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಒಂದೇ ದಿನ 222 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 6662ಕ್ಕೇರಿದೆ. ತುಮಕೂರು ತಾಲೂಕಿನಲ್ಲಿ 57 ಮಂದಿಗೆ ಸೋಂಕು ತಗುಲಿದರೆ, ತಿಪಟೂರು ಹಾಗೂ ಪಾವಗಡ ತಾಲೂಕಿನಲ್ಲಿ ತಲಾ 27 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಚಿಕ್ಕನಾಯಕನಹಳ್ಳಿ 23, ಕುಣಿಗಲ್ 21, ಮಧುಗಿರಿ 20, ತುರುವೇಕೆರೆ 19 ಹಾಗೂ ಗುಬ್ಬಿ ತಾಲೂಕಿನಲ್ಲಿ 13 ಜನರಿಗೆ ಸೋಂಕು ತಗುಲಿದೆ. ಕೊರಟಗೆರೆ ಹಾಗೂ ಶಿರಾ ತಾಲೂಕಿನಲ್ಲಿ 9 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
189 ಮಂದಿ ಗುಣಮುಖ: ಗುರುವಾರ 189 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದು ಈವರೆಗೆ 4704 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. 1778 ಸಕ್ರಿಯ ಪ್ರಕರಣಗಳಿದ್ದು ಸರ್ಕಾರಿ ಆಸ್ಪತ್ರೆ 14 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 18 ಒಟ್ಟು 32 ಮಂದಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.