ಅಪಹರಿಸಿ ಥಳಿಸಿದ್ದ ಆರು ಜನರ ಬಂಧನ

shashikumar
Published on

ಹುಬ್ಬಳ್ಳಿ: ಸಿನಿಮಾ ಶೈಲಿಯಲ್ಲಿ ವ್ಯಕ್ತಿಯೊಬ್ಬನನ್ನು ಅಪಹರಿಸಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಡುಗಿ ವಿಚಾರವಾಗಿ ರಾಜಗೋಪಲ ನಗರ ನಿವಾಸಿ ವಿನಾಯಕ ಭಂಡಾರಿಯನ್ನು ಹಿಗ್ಗಾಮುಗ್ಗಾ ಥಳಿಸಿ, ಅಪಹರಣ ಮಾಡಲಾಗಿತ್ತು. ಪೃಥ್ವಿ ಮತ್ತು ಸಹಚರರಿಂದ ಹಲ್ಲೆ ನಡೆದಿತ್ತು ಎಂದು ದೂರು ದಾಖಲಾಗಿತ್ತು. ಪೃಥ್ವಿರಾಜ ಬೇತಾಪಲ್ಲಿ, ನವೀನ ತಲಪೂರ, ನಿಖಿಲ್ ಕತ್ರಿಮಲ್ಲ, ಮನೋಜ ಸಾಮ್ರಾಣಿ, ಯಶವಂತ ತಲಪೂರ, ಪ್ರಭುಕುಮಾರ ದೊಡ್ಡಮನಿ ಎಂಬುವವರನ್ನು ಬಂಧಿಸಲಾಗಿದೆ ಎಂದರು.

ಯುವತಿಯ ಪ್ರೀತಿ ವಿಚಾರಕ್ಕೆ ವಿನಾಯಕ ಮತ್ತು ಆತನ ಪತ್ನಿ ಒಪ್ಪಿಗೆ ಕೊಟ್ಟಿಲ್ಲ ಎಂದು ಸಿಟ್ಟಾಗಿದ್ದ ಪೃಥ್ವಿ ತನ್ನ ಸ್ನೇಹಿತರೊಂದಿಗೆ ಬೈಕ್ ಮೇಲೆ ಬಂದು ವಿನಾಯಕನನ್ನು ಹತ್ತಿಸಿಕೊಂಡು ಶೆಡ್‌ಗೆ ಕರೆದುಕೊಂಡು ಹೋಗಿದ್ದ. ಅಲ್ಲಿಯೇ ಕೂಡಿ ಹಾಕಿ ಹಲ್ಲೆ ಮಾಡಿದ್ದ. ಈ ಬಗ್ಗೆ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ರೌಡಿಶೀಟರ್ ಪೃಥ್ವಿ ವಿರುದ್ಧ ಕಸಬಾಪೇಟೆ ಠಾಣೆಯಲ್ಲಿ ನಾಲ್ಕು ಪ್ರಕರಣಗಳಿವೆ. ಆರೋಪಿಯೊಬ್ಬನ ಮೇಲೆ ಕಳವು ಪ್ರಕರಣವಿದೆ. ಕೊಲೆ ಯತ್ನ ಪ್ರಕರಣ ಆರೋಪದಡಿ ಆರು ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಪೃಥ್ವಿ ಪ್ರೀತಿಸುತ್ತಿದ್ದ ಹುಡುಗಿಯನ್ನು ವಿನಾಯಕ ಈ ಮೊದಲು ಪ್ರೀತಿಸುತ್ತಿದ್ದ. ಆದರೆ, ಆ ಹುಡುಗಿ ಒಪ್ಪಿಗೆ ಕೊಡದೇ ಇದ್ದಾಗ ಆ ಹುಡುಗಿಯ ಅಕ್ಕನನ್ನು ಮದುವೆಯಾಗಿದ್ದ. ಈ ಎಲ್ಲ ಸಮಸ್ಯೆ ಕುರಿತು ಪರಿಶೀಲಿಸಲಾಗುವುದು ಎಂದರು.

405 ಖಾಲಿ ಸಿಲಿಂಡರ್ ವಶ: ಪರವಾನಗಿ ಇಲ್ಲದೆ ಅಕ್ರಮವಾಗಿ 405 ಖಾಲಿ ಸಿಲಿಂಡರ್ ಇಟ್ಟುಕೊಳ್ಳಲಾಗಿದೆ ಎಂದು ಆಹಾರ ನಿರೀಕ್ಷಕ ಶಿವಪ್ಪ ಬನಹಳ್ಳಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಲಿಂಡರ್ ವಶಪಡಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.

ಪ್ರಾಧ್ಯಾಪಕಿಯೊಬ್ಬರಿಗೆ ವಿಡಿಯೋ ಕಾಲ್ ಮಾಡಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ. ಸಾರ್ವಜನಿಕರು ಮೊಬೈಲ್ ಫೋನ್ ದುರಸ್ತಿಗೆ ಕೊಡುವುದರಿಂದ ಹಿಡಿದು ಪ್ರತಿ ಹಂತದಲ್ಲಿಯೂ ಎಚ್ಚರಿಕೆ ವಹಿಸಬೇಕು ಎಂದು ತಿಳಿವಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net