ಕರ್ತವ್ಯ ಲೋಪವೆಸಗಿದರೆ ನಿರ್ದಾಕ್ಷಿಣ್ಯ ಕ್ರಮ: ಜಿ.ಪಂ ಸಿಇಒ ಕೆ.ಆರ್.ನಂದಿನಿ ಎಚ್ಚರಿಕೆ

Ceo K.R.Nandini
Published on

ಮಂಡ್ಯ: ಹಣ ಹಾಗೂ ಅಧಿಕಾರ ದುರುಪಯೋಗ ಮತ್ತು ಕರ್ತವ್ಯ ಲೋಪವೆಸಗಿದ ಅಧಿಕಾರಿ, ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಆದೇಶ ಹೊರಡಿಸಿರುವ ಅವರುಮ ಕಳೆದ 10 ತಿಂಗಳಿನಲ್ಲಿ ಈ ರೀತಿಯ ಪ್ರಕರಣಗಳ ಬಗ್ಗೆ ತ್ವರಿತವಾಗಿ ಕ್ರಮ ತೆಗೆದುಕೊಂಡು ಅಂತರ ತಾಲೂಕು ಮತ್ತು ಜಿಲ್ಲಾ ಸಮಿತಿ ರಚನೆ ಮಾಡಿ ಮೇಲ್ನೋಟಕ್ಕೆ ಆರೋಪ ಸಾಬೀತಾಗಿದೆ ಎಂದು ವರದಿಯಾಗಿರುವ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಲೂಕಿನ ಗೋಪಾಲಪುರ ಗ್ರಾಪಂನಲ್ಲಿ ಕರ್ತವ್ಯ ಲೋಪ ಎಸಗಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ. ಅಂತೆಯೇ ಇಂಡುವಾಳು ಗ್ರಾಪಂನಲ್ಲಿ ಇ-ಸ್ವತ್ತು ವಿತರಣೆಯಲ್ಲಿ ಕರ್ತವ್ಯ ಲೋಪ ಎಸಗಿದ ಹಿಂದಿನ ಪಿಡಿಒ ಅಮಾನತುಗೊಳಿಸಲಾಗಿದೆ. ಮುರುಕನಹಳ್ಳಿ ಗ್ರಾಪಂನಲ್ಲಿ ಸಾರ್ವಜನಿಕರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸ್ ವಶಕ್ಕೆ ಪಡೆಯಲಾಗಿದ್ದ ಪಿಡಿಒ ಅಮಾನತು, ಗೊಂಡೇನಹಳ್ಳಿ ಗ್ರಾಪಂನಲ್ಲಿ ಹೆಚ್ಚುವರಿ ಪ್ರಭಾರದಲ್ಲಿದ್ದ ಪಿಡಿಒ ಹಣ ದುರುಪಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿ ಹಾಗೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಇಒ ವಿರುದ್ಧ ಸಹ ಶಿಸ್ತು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಮಂದಗೆರೆ ಗ್ರಾಪಂನಲ್ಲಿ ಹಣ ದುರುಪಯೋಗ, ಕರ್ತವ್ಯ ಲೋಪ ಹಾಗೂ ಗ್ರಾ.ಪಂ ಚುನಾಯಿತ ಸದಸ್ಯರೊಂದಿಗೆ ಅನುಚಿತ ವರ್ತನೆ ತೋರಿದ ಪಿಡಿಒ ವಿರುದ್ಧ ಕ್ರಮ ವಹಿಸಲಾಗಿದೆ. ಮಾತ್ರವಲ್ಲದೆ ನರೇಗಾ ಯೋಜನೆಯಲ್ಲಿಯೂ ಕರ್ತವ್ಯ ಲೋಪವಾಗಿರುವ ಬಗ್ಗೆ ದೂರು ಸ್ವೀಕೃತವಾಗಿದ್ದು, ತನಿಖೆ ನಡೆಸಲು ತಂಡವನ್ನು ರಚಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ನರೇಗಾ ಯೋಜನೆಯ ಹೊರಗುತ್ತಿಗೆ ಸಿಬ್ಬಂದಿ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಲಕ್ಷ್ಮೀಪುರ ಗ್ರಾಪಂಗೆ ಸಂಬಂಧಿಸಿದಂತೆ ನರೇಗಾ ಯೋಜನೆಯಡಿ ರಸ್ತೆ ಬದು ನೆಡು ತೋಪು ಕಾಮಗಾರಿಯಲ್ಲಿ ಕಾಮಗಾರಿ ನಡೆಸದೇ ಹಣ ಪಾವತಿಸಿರುವ ದೂರಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ತನಿಖಾ ತಂಡ ರಚಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಹಂತದ ಅಧಿಕಾರಿ, ಸಿಬ್ಬಂದಿ ಹಾಗೂ ಹೊಗುತ್ತಿಗೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದೇ ರೀತಿ ಹಣ ಹಾಗೂ ಅಧಿಕಾರ ದುರುಪಯೋಗ ಪ್ರಕರಣಗಳಲ್ಲಿ ಭಾಗಿಯಾಗಿರುವ ಇತರ ಸಿಬ್ಬಂದಿ ವಿರುದ್ಧವೂ ಕ್ರಮ ವಹಿಸಲಾಗುತ್ತಿದೆ. ಆದ್ದರಿಂದ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net