ಮೈಸೂರು: ಆರಮನೆಯ ಮುಂಭಾಗವೇ ಹಾಡಹಗಲೇ ಕ್ಯಾತಮಾರನಹಳ್ಳಿಯ ವೆಂಕಟೇಶ್ ಅಲಿಯಾಸ್ ಗಿಲ್ಕಿ ವೆಂಕಟೇಶ್‌ನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಾಯ್ಡುನಗರದ ಕೀರ್ತಿಕುಮಾರ್ (28), ಗಾಯತ್ರಿಪುರಂನ ಹಾಲಪ್ಪ (24), ವೀರನಗೆರೆಯ ನಂದನ್ (27), ಸಿದ್ಧಾರ್ಥ ಬಡಾವಣೆಯ ನಿರೂಪ್ (28), ನಜರ್‌ಬಾದ್‌ನ ಭರತ್ (22) ಹಾಗೂ ಮಂಡ್ಯ ಜಿಲ್ಲೆಯ ಮೈಲಾಪುರದ ಧ್ರುವಕುಮಾರ್ (24) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮಚ್ಚು, ಲಾಂಗ್, ಆಟೋ, ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ.
ಪೊಲೀಸ್ ಅಧಿಕಾರಿಗಳು ಕೊಲೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ತೆಗೆದಿದ್ದ ಫೋಟೋ, ವಿಡಿಯೋ ಮತ್ತು ಸುತ್ತಲಿನ ಸಿಸಿ ಕ್ಯಾಮರಾ ಫೂಟೇಜ್‌ಗಳ ಸುಳಿವಿನ ಆಧಾರದ ಮೇಲೆ ಬುಧವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದರು. ನಗರದ ಹೊರ ವಲಯದಲ್ಲಿದ್ದ ಆರೋಪಿಗಳನ್ನು ಕೊಲೆ ನಡೆದ 24 ಗಂಟೆಯಲ್ಲೇ ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತರು ಕೊಲೆಯಾದ ರೌಡಿಶೀಟರ್ ಕಾರ್ತಿಕ್ ಸಹಚರರು ಎನ್ನಲಾಗಿದ್ದು, ವೆಂಕಟೇಶನನ್ನು ಕಣ್ಣಿಗೆ ಕಾರದಪುಡಿ ಎರಚಿ ಹತ್ಯೆಗೈದಿದ್ದರು.
ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನಾಲ್ಕು ತಂಡ ರಚಿಸಿದ್ದರು.
ಪ್ರತೀಕಾರಕ್ಕಾಗಿ ಕೊಲೆ:
ಕಾರ್ತಿಕ್ ಸಹಚರ ಎನ್ನಲಾದ ವೆಂಕಟೇಶ್ ಅಲಿಯಾಸ್ ಗಿಲ್ಕಿ ವೆಂಕಟೇಶ್ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ತಿಕ್ ಕೊಲೆಗೆ ಪ್ರತಿಕಾರವಾಗಿ ವೆಂಕಟೇಶ್ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೆಲ ತಿಂಗಳ ಹಿಂದೆ ಕೆಲವರು ನನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಪೊಲೀಸರಿಗೂ ವೆಂಕಟೇಶ್ ಮಾಹಿತಿ ನೀಡಿದ್ದ ಎನ್ನಲಾಗಿದೆ.