ಆರು ಕೆರೆಗಳಿಗೆ ಸಿಕ್ತು ಕಾಯಕಲ್ಪ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ

Mangaluru Lake
Published on

ಹರೀಶ್ ಮೋಟುಕಾನ ಮಂಗಳೂರು

ಮಂಗಳೂರಿನ ಕೆರೆಗಳನ್ನು ಪುನರುಜ್ಜೀವನಗೊಳಿಸಿ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಗೆ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಾರ್ಯೋನ್ಮುಖವಾಗಿದ್ದು, ಈಗಾಗಲೇ ಆರು ಕೆರೆಗಳು ಅಭಿವೃದ್ಧಿ ಹೊಂದಿ ಉದ್ಘಾಟನೆಗೆ ಸಜ್ಜಾಗಿವೆ. ಇನ್ನೂ ಆರು ಕೆರೆಗಳ ಅಭಿವೃದ್ಧಿ ಪ್ರಗತಿಯಲ್ಲಿದೆ.

ಮುಡಾ ವ್ಯಾಪ್ತಿಯ ಮಂಗಳೂರು, ಮೂಲ್ಕಿ, ಉಳ್ಳಾಲ ಪ್ರದೇಶಗಳಲ್ಲಿ ಪ್ರಸ್ತುತ ಉಳಿದಿರುವ ಕೆರೆಗಳನ್ನು ಸಮೀಕ್ಷೆ ಮಾಡಿ ಪ್ರಾಧಿಕಾರದಲ್ಲಿರುವ ಕೆರೆಗಳ ಅಭಿವೃದ್ಧಿ ಮೊತ್ತ ಬಳಸಿಕೊಂಡು ಪುನರುಜ್ಜೀವನಗೊಳಿಸಲು ನಿರ್ಧರಿಸಲಾಗಿತ್ತು. ಅದರಂತೆ ಪ್ರಥಮ ಹಂತದಲ್ಲಿ 12 ಕೆರೆಗಳನ್ನು ಆಯ್ಕೆ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಹೊಸದಾಗಿ ಕೆಲವು ಕೆರೆಗಳ ಸಮೀಕ್ಷೆ ನಡೆಸಲಾಗುತ್ತಿದೆ.

ಆರು ಕೆರೆಗಳ ಕಾಮಗಾರಿ ಪೂರ್ಣ: ಜಪ್ಪಿನಮೊಗರು ಗ್ರಾಮದ ಕಂರ್ಬಿಸ್ಥಾನ ಕೆರೆಯನ್ನು 25 ಲಕ್ಷ ರೂ., ಕೊಣಾಜೆ ಸಮೀಪದ ದಡಸ ಕೆರೆಯನ್ನು 99 ಲಕ್ಷ ರೂ., ಬಜಾಲ್ ಗ್ರಾಮದ ಕುಂದೋಡಿ ಕೆರೆಯನ್ನು 25 ಲಕ್ಷ ರೂ., ಕಸ್ಬ ಬಜಾರ್ ಗ್ರಾಮದ ನಡುಪಳ್ಳಿ ಜುಮಾ ಮಸೀದಿ ಕೆರೆಯನ್ನು 20 ಲಕ್ಷ ರೂ. ವೆಚ್ಚದಲ್ಲಿ, ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಜಳಕದ ಕೆರೆಯನ್ನು 1.5 ಕೋಟಿ ರೂ., ಕಾಟಿಪಳ್ಳ ಕೆರೆಯನ್ನು 98 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಆರು ಕೆರೆಗಳ ಕಾಮಗಾರಿ ಪ್ರಗತಿ: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಇನ್ನೂ ಆರು ಕೆರೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ. ಪಡೀಲ್‌ನ ಬೈರಾಡಿ ಕೆರೆ ಅಭಿವೃದ್ಧಿಗೆ ಮುಡಾದಿಂದ 2.54 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಪಡುಪಣಂಬೂರು ಕೆರೆ 25 ಲಕ್ಷ ರೂ., ನೀರುಮಾರ್ಗ ಬೊಂಡಂತಿಲ ಕಪ್ಪದಟ್ಟು ಕೆರೆಯನ್ನು 20 ಲಕ್ಷ ರೂ. ವೆಚ್ಚದಲ್ಲಿ, ಬೊಂಡಂತಿಲ ಪಕ್ಕಲಪಾದೆ ಕೆರೆಯನ್ನು 25 ಲಕ್ಷ ರೂ. ವೆಚ್ಚದಲ್ಲಿ, ಕದ್ರಿ ಕೈಬಟ್ಟಲು ಕೆರೆಯನ್ನು 1 ಕೋಟಿ ರೂ. ಹಾಗೂ ಕದ್ರಿ ಜೋಗಿ ಮಠದ ಕೆರೆಯನ್ನು 50 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿವೆ.

ಅಭಿವೃದ್ಧಿ ನಿರೀಕ್ಷೆಯಲ್ಲಿ: ಬೋಳೂರು ವಾರ್ಡ್‌ನ ಕುಟ್ಟಿನಾಡ್ ಕೆರೆ, ಅಳಪೆಯ ಕಂರ್ಭಿಮಾರ್ ಕೆರೆ, ಮಂಗಳೂರು ಮಹಾಮ್ಮಾಯ ಕೆರೆ, ಟ್ಯಾಂಕ್ ಕಾಲನಿ ಕೆರೆ, ಹರೇಕಳ ಗ್ರಾಮದ ರಾಜಗುಡ್ಡೆಯ ತಾವರೆಕೆರೆ, ಅಂಬ್ಲಮೊಗರು ವಾಡ ಕೆರೆ, ಉಳ್ಳಾಲ ನಗರಸಭೆಯ ಒಂಭತ್ತುಕೆರೆ ಬಳಿಯ ಸಾರ್ವಜನಿಕ ಕೆರೆ, ಬೆಳ್ಮ ಗ್ರಾಮದ ಬೆಳ್ಮ ದೋಟ ಸಾರ್ವಜನಿಕ ಕೆರೆ ಮುಂತಾದ ಕೆರೆಗಳು ಅಭಿವೃದ್ಧಿ ನಿರೀಕ್ಷೆಯಲ್ಲಿವೆ. ರಾಜ್ಯ ಸರ್ಕಾರದ ವಿವಿಧ ಅನುದಾನಗಳಿಂದ ಗುಜ್ಜರಕೆರೆ ಅಭಿವೃದ್ಧಿ ಕಾರ್ಯ ಹಲವು ವರ್ಷಗಳಿಂದ ನಡೆಯುತ್ತಿದೆ. ಸದ್ಯ ಸ್ಮಾರ್ಟ್ ಸಿಟಿ ಯೋಜನೆಯಡಿ 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಕಾವೂರು ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜಪ್ಪಿನಮೊಗರು ಬಳಿ ಈಗಾಗಲೇ ಎರಡು ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಲಾದ ಆರು ಕೆರೆಗಳು ಉದ್ಘಾಟನೆಗೆ ಸಜ್ಜಾಗಿವೆ. ಆರು ಕೆರೆಗಳ ಕೆಲಸ ಪ್ರಗತಿಯಲ್ಲಿದೆ. ಕಾಮಗಾರಿ ಪೂರ್ಣಗೊಂಡ ಕೆರೆಗಳನ್ನು ನವರಾತ್ರಿಯ ಪರ್ವಕಾಲದಲ್ಲಿ ಶಾಸಕರು, ಮೇಯರ್ ಅವರ ಸಮಯ ಹೊಂದಾಣಿಕೆ ಮಾಡಿಕೊಂಡು ಉದ್ಘಾಟಿಸಲು ನಿರ್ಧರಿಸಲಾಗಿದೆ. ರವಿಶಂಕರ ಮಿಜಾರ್ಅಧ್ಯಕ್ಷರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net